VIDEO: ಸ್ಟಾರ್ ಕ್ರಿಕೆಟಿಗರ ಬೌಲಿಂಗ್ ಶೈಲಿ ಅನುಕರಿಸುವ ಜಸ್‌ಪ್ರೀತ್ ಬುಮ್ರಾ..!

bhumrah
Published on

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭಗೊಂಡಿದೆ. 8 ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ. ಅಬುಧಾಬಿಯಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಶೇಖ್ ಜಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಭ್ಯಾಸ ಕೈಗೊಂಡಿದೆ. ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅಭ್ಯಾಸದ ವೇಳೆ ವಿವಿಧ ಬೌಲರ್‌ಗಳ ಶೈಲಿಯನ್ನು ಅನುಕರಿಸುವ ಮೂಲಕ ಗಮನಸೆಳೆದಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ, ಶ್ರೀಲಂಕಾದ ಮಾಲಿಂಗ ಬೌಲಿಂಗ್ ಶೈಲಿ ಅನುಕರಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ವಿಡಿಯೋವನ್ನು ಟ್ವಿಟರ್‌ನಲ್ಲಿ ಪ್ರಕಟಿಸಿದೆ.

6 ಸ್ಟಾರ್ ಬೌಲರ್‌ಗಳ ಶೈಲಿಯನ್ನು ಅನುಕರಿಸಿರುವ ಬುಮ್ರಾ, ಅಭ್ಯಾಸದ ವೇಳೆ ಸಹ- ಆಟಗಾರರಿಗೆ ತೋರಿಸುವ ಮೂಲಕ ತಮಾಷೆ ಮಾಡಿದ್ದಾರೆ. ಲಸಿತ್ ಮಾಲಿಂಗ ಬೌಲಿಂಗ್ ಶೈಲಿ ಅನುಕರಿಸಿದ ಬೆನ್ನಲ್ಲೇ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್‌ಗ್ರಾತ್, ಮಿಚೆಲ್ ಸ್ಟಾರ್ಕ್, ಕೇದಾರ್ ಜಾಧವ್, ರಶೀದ್ ಖಾನ್ ಹಾಗೂ ಕಡೆಯದಾಗಿ ಅನಿಲ್ ಕುಂಬ್ಳೆ ಶೈಲಿ ತೋರಿಸಿದ್ದಾರೆ. ಶ್ರೀಲಂಕಾದ ಲಸಿತ್ ಮಾಲಿಂಗ ಅನುಪಸ್ಥಿತಿಯಲ್ಲಿ ಬುಮ್ರಾ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿದ್ದಾರೆ.

ಕಳೆದ ವರ್ಷ ಮುಂಬೈ ತಂಡ ಟ್ರೋಫಿ ಜಯಿಸುವಲ್ಲಿ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಆಡಿದ 16 ಪಂದ್ಯಗಳಿಂದ 19 ವಿಕೆಟ್ ಕಬಳಿಸಿದ್ದರು. ಮಾಲಿಂಗ ಬದಲಿಗೆ ಆಸ್ಟ್ರೇಲಿಯಾದ ವೇಗಿ ಜೇಮ್ಸ್ ಪ್ಯಾಟಿನ್‌ಸನ್ ಸ್ಥಾನ ತುಂಬಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಸೆ.19 ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net