

ನವದೆಹಲಿ: ಏಕದಿನ ವಿಶ್ವಕಪ್ ಫೈನಲ್ನಲ್ಲಿ ಅನುಭವಿಸಿದ ನಿರಾಸೆಯ ಬಳಿಕ, ಮುಂದಿನ ವರ್ಷದ ಟಿ20 ವಿಶ್ವಕಪ್ನಲ್ಲಿ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುವುದು ಭಾರತ ತಂಡದ ಗುರಿಯಾಗಿದೆ. ಆದರೆ ವಿಶ್ವಕಪ್ ತಂಡವನ್ನು ಮುಂದಿನ 10 ಟಿ20 ಪಂದ್ಯಗಳಲ್ಲೇ ಅಂತಿಮಗೊಳಿಸಬೇಕಾದ ಸವಾಲು ಭಾರತದ ಮುಂದಿದೆ.
ಟಿ20 ವಿಶ್ವಕಪ್ ಟೂರ್ನಿ ಮುಂದಿನ ವರ್ಷ ಜೂನ್ 4ರಿಂದ 30ರವರೆಗೆ ನಡೆಯಲಿದೆ. ಅದಕ್ಕೆ ಮುನ್ನ ಪ್ರವಾಸಿ ಆಸ್ಟ್ರೆಲಿಯಾ ವಿರುದ್ಧದ ಹಾಲಿ ಟಿ20 ಸರಣಿಯ ಉಳಿದ 4 ಪಂದ್ಯಗಳಲ್ಲದೆ, ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ 3 ಮತ್ತು ಜನವರಿಯಲ್ಲಿ ಅ್ಘಾನಿಸ್ತಾನ ವಿರುದ್ಧ 3 ಟಿ20 ಪಂದ್ಯಗಳನ್ನು ಮಾತ್ರ ಭಾರತ ತಂಡ ಆಡಲಿದೆ. ಭಾರತ ತಂಡದ ಮುಂದಿನ ಕೋಚ್ ಆಗುವ ರೇಸ್ನಲ್ಲಿ ಮುಂಚೂಣಿಯಲ್ಲಿರುವ ವಿವಿಎಸ್ ಲಕ್ಷ್ಮಣ್, ಆಸೀಸ್ ವಿರುದ್ಧದ ಹಾಲಿ ಟಿ20 ಸರಣಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದು, ಭಾರತಕ್ಕೆ ವಿಶ್ವಕಪ್ ತಂಡವನ್ನು ಅಂತಿಮಗೊಳಿಸಲು ನೆರವಾಗುವ ನಿರೀಕ್ಷೆ ಇದೆ.
ಇನ್ನು ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ವಿಶ್ವಕಪ್ಗೆ ಮುನ್ನ ಭಾರತ ಪರ ಯಾವುದೇ ಪಂದ್ಯ ಆಡುವ ಸಾಧ್ಯತೆಯೂ ಇಲ್ಲ. ಮುಂದಿನ ವರ್ಷದ ಐಪಿಎಲ್ ವೇಳೆಗೆ ಹಾರ್ದಿಕ್ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದರೂ, ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ಆಡಬೇಕಾದ ಸವಾಲು ಇದೆ. ಹೀಗಾಗಿ ವಿಶ್ವಕಪ್ಗೆ ಮುನ್ನ ಭಾರತದ ಪೂರ್ಣ ಪ್ರಮಾಣದ ಟಿ20 ತಂಡ ಕಣಕ್ಕಿಳಿಯುವ ಸಾಧ್ಯತೆಗಳಿಲ್ಲ.
ಆಸೀಸ್, ಆಫ್ರಿಕಾ, ಆ್ಘನ್ ವಿರುದ್ಧದ ಸರಣಿಯಲ್ಲಿ ಆಡುವ ಆಟಗಾರರೇ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದಾದರೂ, ಮಾರ್ಚ್-ಏಪ್ರಿಲ್&ಮೇನಲ್ಲಿ ಐಪಿಎಲ್ ವೇಳೆ ಯಾರಾದರೂ ಹೊಸ ಆಟಗಾರರು ಗಮನಸೆಳೆದರೆ ಅಚ್ಚರಿಯ ಆಯ್ಕೆ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ರೋಹಿತ್, ಕೊಹ್ಲಿ ಬಗ್ಗೆ ಗೊಂದಲ
ಟಿ20 ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಜತೆಗೆ ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಶುಭಮಾನ್ ಗಿಲ್ ಖಚಿತ ಆಯ್ಕೆ ಎನಿಸಿದ್ದಾರೆ. ಆದರೆ ಭಾರತದ ಅನುಭವಿ ಆಟಗಾರರಾದ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ನಲ್ಲಿ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ. 2022ರ ಟಿ20 ವಿಶ್ವಕಪ್ ಬಳಿಕ ಇವರು ಭಾರತ ಪರ ಒಂದೂ ಪಂದ್ಯ ಆಡಿಲ್ಲ. ಆದರೆ ಟಿ20 ವಿಶ್ವಕಪ್ನಲ್ಲಿ ಆಡುವ ಅಥವಾ ಗೈರಾಗುವ ಆಯ್ಕೆಯನ್ನು ಆಯ್ಕೆಗಾರರು ಇವರಿಬ್ಬರಿಗೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ರೋಹಿತ್ ಆಡದಿದ್ದರೆ ಆರಂಭಿಕನ ಸ್ಥಾನಕ್ಕೆ ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್ ಪೈಪೋಟಿ ನಡೆಸಲಿದ್ದಾರೆ. 3ನೇ ಕ್ರಮಾಂಕಕ್ಕೆ ಕೊಹ್ಲಿ ಗೈರಾದರೆ, ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶನ್ ಆ ಸ್ಥಾನದಲ್ಲಿ ಆಡಬಹುದು.
ರಿಂಕು ಸಿಂಗ್ ಫಿನಿಷರ್
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್, ಹಾರ್ದಿಕ್ ಪಾಂಡ್ಯ ಆಡುವುದು ಖಚಿತವಿದ್ದರೆ, ಉಳಿದೊಂದು ಸ್ಥಾನಕ್ಕೆ ರಿಂಕು ಸಿಂಗ್ ಜತೆ ತಿಲಕ್ ವರ್ಮ, ಸಂಜು ಸ್ಯಾಮ್ಸನ್ ಪೈಪೋಟಿ ನಡೆಸಲಿದ್ದಾರೆ. 2022ರ ಟಿ20 ವಿಶ್ವಕಪ್ನಲ್ಲಿ ದಿನೇಶ್ ಕಾರ್ತಿಕ್ಗೆ ನೀಡಲಾಗಿದ್ದ ಫಿನಿಷರ್ ಪಾತ್ರ ಈ ಬಾರಿ ರಿಂಕು ಸಿಂಗ್ಗೆ ಒಲಿಯಬಹುದು.
ಟಿ20 ವಿಶ್ವಕಪ್ ತಂಡದ ರೇಸ್ನಲ್ಲಿರುವವರು:
ಬ್ಯಾಟರ್ಸ್: ರೋಹಿತ್ ಶರ್ಮ, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ರಿಂಕು ಸಿಂಗ್.
ವಿಕೆಟ್ ಕೀಪರ್ಸ್: ಇಶಾನ್ ಕಿಶನ್, ಕೆಎಲ್ ರಾಹುಲ್, ಜಿತೇಶ್ ಶರ್ಮ, ಸಂಜು ಸ್ಯಾಮ್ಸನ್, ರಿಷಭ್ ಪಂತ್ (ಫಿಟ್ ಆದರೆ).
ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್.
ಸ್ಪಿನ್ನರ್ಸ್: ಕುಲದೀಪ್ ಯಾದವ್, ರವಿ ಬಿಷ್ಣೋಯಿ, ಯಜುವೇಂದ್ರ ಚಾಹಲ್.
ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ, ಮೊಹಮದ್ ಸಿರಾಜ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಮುಕೇಶ್ ಕುಮಾರ್, ಆವೇಶ್ ಖಾನ್.