ಐಪಿಎಲ್​ ಕಂಡ ಯಶಸ್ವಿ ನಾಯಕ ರೋಹಿತ್​ ಶರ್ಮ 2025ರಲ್ಲಿ ಮುಂಬೈ ಇಂಡಿಯನ್ಸ್ ತೊರೆಯುವರೇ?

rohit web
Published on

ಮುಂಬೈ: ರೋಹಿತ್​ ಶರ್ಮ ಐಪಿಎಲ್​ ಕಂಡ ಅತ್ಯಂತ ಯಶಸ್ವಿ ನಾಯಕರು. 36 ವರ್ಷದ ರೋಹಿತ್​ ಸಾರಥ್ಯದಲ್ಲಿ ಮುಂಬೈ ತಂಡ 2013, 2015, 2017, 2019, 2020ರಲ್ಲಿ ಐಪಿಎಲ್​ ಪ್ರಶಸ್ತಿ ಗೆದ್ದಿತ್ತು. ಮೊದಲ 5 ಆವೃತ್ತಿಗಳಲ್ಲಿ ನಿರಾಸೆ ಅನುಭವಿಸಿದ್ದ ಮುಂಬೈ, ರೋಹಿತ್​ ನಾಯಕತ್ವ ವಹಿಸಿಕೊಂಡ ಮೊದಲ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದಿತ್ತು ಎಂಬುದು ವಿಶೇಷ. ಐಪಿಎಲ್​ ನಾಯಕತ್ವದ ಈ ಯಶಸ್ಸಿನಿಂದಲೇ ರೋಹಿತ್​ಗೆ ಟೀಮ್​ ಇಂಡಿಯಾದ ನಾಯಕತ್ವವೂ ಒಲಿದಿತ್ತು. ರೋಹಿತ್​ ತವರಿನ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡವನ್ನೂ ಫೈನಲ್​ಗೇರಿಸಿದ್ದರು. ಮುಂದಿನ ವರ್ಷದ ಟಿ20 ವಿಶ್ವಕಪ್​ಗೂ ಅವರೇ ಭಾರತ ತಂಡದ ನಾಯಕರಾಗಿರುವ ನಿರೀಕ್ಷೆ ಇದೆ. ಇದರ ನಡುವೆ ಅವರು ಮುಂಬೈ ಇಂಡಿಯನ್ಸ್ ಅಂದರೆ ಫ್ರಾಂಚೈಸಿ ತಂಡವೊಂದರ ನಾಯಕತ್ವ ಕಳೆದುಕೊಂಡಿರುವುದು ಆಘಾತಕಾರಿಯಾಗಿದೆ.

ಹಾರ್ದಿಕ್​ ಇತ್ತೀಚೆಗೆ ಮುಂಬೈಗೆ ಮರಳಿದಾಗಲೇ ಮುಂಬೈಗೆ ಭವಿಷ್ಯದ ನಾಯಕರಾಗುವ ನಿರೀಕ್ಷೆ ಇತ್ತು. ಆದರೆ ಈ ಸಲವೇ ನಾಯಕನ ಪಟ್ಟಕ್ಕೇರಿರುವುದು ಅಚ್ಚರಿ ಎನಿಸಿದೆ. ರೋಹಿತ್​ ಸಹಮತ ಪಡೆದೇ ಹಾರ್ದಿಕ್​ ಈ ಬಾರಿ ನಾಯಕರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ರೋಹಿತ್​ ಅನುಮತಿ ಇಲ್ಲದೆ ನಾಯಕತ್ವ ಬದಲಾವಣೆ ಮಾಡಿದ್ದರೆ ಮುಂಬೈ ಇಂಡಿಯನ್ಸ್ ತಂಡದ ಅದರ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ.

ಮುಂಬೈ ಆಟಗಾರರಾಗಿ ರೋಹಿತ್​ಗೆ ಇದುವೇ ಕೊನೇ ಐಪಿಎಲ್​ ಆಗುವ ಸಾಧ್ಯತೆಯೂ ಇದೆ. 2025ರ ಮೆಗಾ ಹರಾಜಿಗೆ ಮುನ್ನ ರೋಹಿತ್​ ಮುಂಬೈ ತಂಡದಿಂದ ಹೊರನಡೆಯುವ ಸಾಧ್ಯತೆಗಳಿವೆ. ಆಗ ರೋಹಿತ್​ ನಾಯಕತ್ವದ ಅನುಭವವನ್ನು ಬಳಸಿಕೊಳ್ಳಲು ಇತರ ತಂಡಗಳು ಪ್ರಯತ್ನಿಸಬಹುದು. ಈ ಹಿಂದೆ ಆಡಂ ಗಿಲ್​​ಕ್ರಿಸ್ಟ್​, ಗೌತಮ್​ ಗಂಭೀರ್​, ಡೇವಿಡ್​ ವಾರ್ನರ್​ ತಮ್ಮ ತಂಡಗಳಿಗೆ ಐಪಿಎಲ್​ ಪ್ರಶಸ್ತಿ ಗೆದ್ದ ಹೊರತಾಗಿಯೂ ಬೇರೆ ತಂಡಗಳಿಗೆ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net