

ನವದೆಹಲಿ/ಮುಂಬೈ: ಕರೊನಾ ವೈರಸ್ ಭೀತಿಯಿಂದಾಗಿ ವಿಶ್ವದೆಲ್ಲೆಡೆಯ ಕ್ರೀಡಾ ಚಟುವಟಿಕೆಗಳು ಈಗಾಗಲೆ ಅಲ್ಲೋಲಕಲ್ಲೋಲವಾಗಿದ್ದು, ಭಾರತೀಯ ಕ್ರಿಕೆಟ್ಗೂ ಇದರ ಬಿಸಿ ತಟ್ಟಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ಗೂ ಈಗ ಕರೊನಾ ಕಂಟಕವಾಗಿ ಪರಿಣಮಿಸಿದ್ದು, ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಕೇಂದ್ರ ಸರ್ಕಾರದ ವೀಸಾ ನಿರ್ಬಂಧದಿಂದಾಗಿ ವಿದೇಶಿ ಕ್ರಿಕೆಟಿಗರು ಕನಿಷ್ಠ ಮೊದಲ 2 ವಾರಗಳ ಕಾಲ ಅಲಭ್ಯರಾಗಲಿದ್ದಾರೆ. ಇದರಿಂದ ಟೂರ್ನಿ ನಡೆಯುವ ಬಗ್ಗೆಯೇ ಅನುಮಾನ ಮೂಡಿದ್ದು, ಶನಿವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯ ಬಳಿಕ ಬಿಸಿಸಿಐ ಅಂತಿಮ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ.
ಸರ್ಕಾರದಿಂದ ಸ್ಪಷ್ಟ ಸೂಚನೆ: ಕರೋನಾ ಸಾಂಕ್ರಾಮಿಕದ ಭೀತಿಯಿಂದಾಗಿ ಕ್ರೀಡಾಕೂಟಗಳಿಗೆ ಜನ ಸೇರುವುದನ್ನು ತಪ್ಪಿಸಬೇಕೆಂದು ಕೇಂದ್ರ ಕ್ರೀಡಾ ಸಚಿವಾಲಯ, ಬಿಸಿಸಿಐ ಸಹಿತ ದೇಶದ ಎಲ್ಲ ಕ್ರೀಡಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಕರೊನಾ ಹರಡುವುದನ್ನು ತಡೆಯಲು ಜನರು ದೊಡ್ಡ ಗುಂಪುಗಳಲ್ಲಿ ಸೇರುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು ಎಂಬ ಆರೋಗ್ಯ ಸಚಿವಾಲಯ ಸೂಚನೆಯನ್ನು ಬಿಸಿಸಿಐ ಸಹಿತ ಎಲ್ಲ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು (ಎನ್ಎಸ್ಎಫ್) ಪಾಲಿಸಬೇಕೆಂದು ಕ್ರೀಡಾ ಕಾರ್ಯದರ್ಶಿ ರಾಧೇ ಶ್ಯಾಮ್ ಜುಲಾನಿಯಾ ತಿಳಿಸಿದ್ದಾರೆ.
ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳು: ದೇಶದಲ್ಲಿ ಕ್ರೀಡಾಕೂಟ ಗಳನ್ನು ನಡೆಸಲು ಯಾವುದೇ ತಡೆ ಇಲ್ಲ. ಆದರೆ ಆರೋಗ್ಯ ಸುರಕ್ಷಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರಾಧೇ ಶ್ಯಾಮ್ ಹೇಳಿದ್ದಾರೆ. ಇದರ ಬೆನ್ನಲ್ಲೇ ದೇಶದ ಎಲ್ಲ ಕ್ರೀಡಾ ಚಟುವಟಿಕೆಗಳಿಗೆ ಪ್ರೇಕ್ಷಕರಿಗೆ ನಿರ್ಬಂಧ ಹೇರಲಾಗಿದೆ. ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಕೊನೇ 2 ಪಂದ್ಯಗಳು, ರಣಜಿ ಟ್ರೋಫಿ ಫೈನಲ್ ಪಂದ್ಯದ ಅಂತಿಮ ದಿನದಾಟ, ಐಎಸ್ಎಲ್ ಫುಟ್ಬಾಲ್ ಫೈನಲ್ ಪಂದ್ಯ ಮತ್ತು ಐಲೀಗ್ ಟೂರ್ನಿಯ ಇತರ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಬಿಸಿಸಿಐ ಮೌನ: ಖಾಲಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸಬೇಕೆಂಬ ಸರ್ಕಾರದ ಸೂಚನೆ ಬಗ್ಗೆ ಬಿಸಿಸಿಐ ಗುರುವಾರ ಪೂರ್ತಿ ಮೌನವಹಿಸಿದೆ. ಐಪಿಎಲ್ ಟಿಕೆಟ್ ಮಾರಾಟದಿಂದಲೇ ಕೋಟಿ ಕೋಟಿ ಹಣ ಬಾಚಿ ಕೊಳ್ಳುವ ಬಿಸಿಸಿಐ, ಫ್ರಾಂಚೈಸಿಗಳಿಗೆ ಇದೊಂದು ಆಘಾತಕಾರಿ ಬೆಳವಣಿಗೆಯಾಗಿದೆ.
ವಿದೇಶಾಂಗ ಸಚಿವಾಲಯದಿಂದಲೂ ಸಲಹೆ: ಈ ವರ್ಷ ಐಪಿಎಲ್ ಆಯೋಜಿಸುವುದು ಬೇಡ ಎಂದು ಕೇಂದ್ರ ವಿದೇಶಾಂಗ ಸಚಿವಾಲಯವೂ ಬಿಸಿಸಿಐಗೆ ಸಲಹೆ ನೀಡಿದೆ. ಆದರೆ ಟೂರ್ನಿ ನಡೆಸುವ ಅಂತಿಮ ನಿರ್ಧಾರ ಸಂಘಟಕರಿಗೆ ಬಿಡುತ್ತೇವೆ ಎಂದು ತಿಳಿಸಿದೆ. -ಪಿಟಿಐ/ಏಜೆನ್ಸೀಸ್
ಚಿನ್ನದ ಮೊಟ್ಟೆ ಇಡುವ ಕೋಳಿ!
ಬರೋಬ್ಬರಿ 475 ಶತಕೋಟಿ ರೂಪಾಯಿ ಬ್ರಾಂಡ್ ಮೌಲ್ಯದ ಐಪಿಎಲ್ನಿಂದ ಬಿಸಿಸಿಐ ಪ್ರತಿ ವರ್ಷ 2 ಸಾವಿರ ಕೋಟಿ ರೂ.ಗೂ ಅಧಿಕ ಆದಾಯ ಗಳಿಸುತ್ತದೆ. ಪ್ರತಿ ಐಪಿಎಲ್ ಫ್ರಾಂಚೈಸಿ 250 ಕೋಟಿ ರೂ. ಆದಾಯ ಗಳಿಸುತ್ತದೆ. ಪ್ರತಿ ಪಂದ್ಯದ ಆತಿಥ್ಯದಿಂದ ರಾಜ್ಯ ಕ್ರಿಕೆಟ್ ಸಂಸ್ಥೆಗಳೂ ತಲಾ 1 ಕೋಟಿ ರೂ. ಆದಾಯ ಗಳಿಸುತ್ತವೆ. ಇನ್ನು ಆಟಗಾರರೂ ಐಪಿಎಲ್ನಿಂದ ಬಹುತೇಕ ಕೋಟಿ ಲೆಕ್ಕದಲ್ಲೇ ಆದಾಯ ಗಳಿಸುತ್ತಾರೆ. ಕೆಲ ಆಟಗಾರರು ವರ್ಷಪೂರ್ತಿ ರಾಷ್ಟ್ರೀಯ ತಂಡದ ಪರ ಆಡಿ ಗಳಿಸುವ ಹಣಕ್ಕಿಂತ ಹೆಚ್ಚು ಗಳಿಕೆಯನ್ನು ಐಪಿಎಲ್ನಲ್ಲೇ ಪಡೆಯುತ್ತಾರೆ. ಐಪಿಎಲ್ನಿಂದ ದೇಶದ ಜಿಡಿಪಿಗೂ 10-15 ಶತಕೋಟಿ ರೂ.ಯಷ್ಟು ಕೊಡುಗೆ ಇರುತ್ತದೆ.
ಮೊದಲ ಎರಡು ವಾರ ಕಾಲ ವಿದೇಶಿಯರು ಆಡಲ್ಲ
ಕರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಪ್ರಿಲ್ 15ರವರೆಗೆ ಎಲ್ಲ ವಿದೇಶಿ ಪ್ರವಾಸಿಗರ ವೀಸಾವನ್ನು ನಿರ್ಬಂಧಿಸಿದೆ. ಇದರಿಂದಾಗಿ ಏಪ್ರಿಲ್ 15ರವರೆಗೆ ಐಪಿಎಲ್ 13ನೇ ಆವೃತ್ತಿಗೆ ವಿದೇಶಿ ಆಟಗಾರರು ಅಲಭ್ಯರಾಗಿದ್ದಾರೆ. ಇದರಿಂದಾಗಿ ಟೂರ್ನಿ ಮೊದಲ 2 ವಾರಗಳಲ್ಲಿ ತನ್ನ ಹೆಸರಿನ ಪ್ರಕಾರವೇ ‘ಭಾರತೀಯರ ಪ್ರೀಮಿಯರ್ ಲೀಗ್’ ಆಗಿರಲಿದೆ. ‘ಐಪಿಎಲ್ನಲ್ಲಿ ಆಡುವ ವಿದೇಶಿ ಆಟಗಾರರು ಬಿಜಿನೆಸ್ ವೀಸಾ ವಿಭಾಗದಲ್ಲಿರುತ್ತಾರೆ. ಇದರಿಂದಾಗಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಅವರೆಲ್ಲರೂ ಏಪ್ರಿಲ್ 15ರವರೆಗೆ ಭಾರತಕ್ಕೆ ಬರುವಂತಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಪಿಎಲ್ನ ಹೆಚ್ಚಿನ ಫ್ರಾಂಚೈಸಿಗಳಿಗೆ ವಿದೇಶಿಯರೇ ಕೋಚ್ಗಳಾಗಿದ್ದು, ಅವರೂ ಅಲಭ್ಯರಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಬುಧವಾರ ಹೊರಡಿಸಿರುವ ಹೊಸ ಸೂಚನೆಯ ಅನ್ವಯ, ಎಲ್ಲ ವಿದೇಶಿ ಪ್ರವಾಸಿಗರಿಗೆ ಈಗಾಗಲೆ ನೀಡಲಾಗಿದ್ದ ವೀಸಾವನ್ನೂ ಏಪ್ರಿಲ್ 15ರವರೆಗೆ ಅಮಾನತುಗೊಳಿಸಲಾಗಿದೆ. ಐಪಿಎಲ್ ಟೂರ್ನಿ ಮಾರ್ಚ್ 29ರಂದು ಮುಂಬೈನಲ್ಲಿ ಶುರುವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಈ ಪಂದ್ಯದ ಟಿಕೆಟ್ಗಳನ್ನು ಮಾರಾಟ ಮಾಡದಂತೆ ಮಹಾರಾಷ್ಟ್ರ ಸರ್ಕಾರ ಈಗಾಗಲೆ ಬಿಸಿಸಿಐಗೆ ಸೂಚನೆ ನೀಡಿದೆ. ಕರ್ನಾಟಕ ಸರ್ಕಾರ ಕೂಡ ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಹಿಂದೇಟು ಹಾಕಿದೆ.
ಟಿವಿಯಲ್ಲಿ ಮಾತ್ರ
ಐಪಿಎಲ್ ಪಂದ್ಯಗಳು ಖಾಲಿ ಕ್ರೀಡಾಂಗಣದಲ್ಲಿ ನಡೆದರೂ, ಕ್ರಿಕೆಟ್ ಪ್ರೇಮಿಗಳಿಗೆ ಟಿವಿ ನೇರಪ್ರಸಾರದಲ್ಲಿ ಪಂದ್ಯಗಳ ರೋಚಕತೆಯನ್ನು ಸವಿಯುವ ಅವಕಾಶವಿರುತ್ತದೆ. ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ 5 ವರ್ಷಗಳ ಅವಧಿಗೆ 16,347 ಕೋಟಿ ರೂ.ಗಳಿಗೆ ಐಪಿಎಲ್ ಪ್ರಸಾರ ಹಕ್ಕು ಪಡೆದುಕೊಂಡಿದ್ದು, ಜಾಹೀರಾತುಗಳಿಂದಲೇ ದೊಡ್ಡ ಆದಾಯ ನಿರೀಕ್ಷಿಸುತ್ತಿದೆ.
ನಾಳೆ ಐಪಿಎಲ್ ಭವಿಷ್ಯ ನಿರ್ಧಾರ
ಕರೊನಾ ಭೀತಿಯಿಂದಾಗಿ ಐಪಿಎಲ್ ಟೂರ್ನಿಗೆ ಮೊದಲ 2 ವಾರಗಳ ಕಾಲ ವಿದೇಶಿ ಆಟಗಾರರು ಅಲಭ್ಯರಾಗಿರುವ ಮತ್ತು ಪ್ರೇಕ್ಷಕರನ್ನು ನಿರ್ಬಂಧಿಸಬೇಕೆಂಬ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ಐಪಿಎಲ್ ಆಡಳಿತ ಮಂಡಳಿ ಶನಿವಾರ ಮಹತ್ವದ ಸಭೆ ಸೇರಲಿದೆ. ವಿದೇಶಿ ಕ್ರಿಕೆಟಿಗರಿಲ್ಲದೆ ಮತ್ತು ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಬೇಕೇ ಅಥವಾ ಸಂಪೂರ್ಣ ಟೂರ್ನಿಯನ್ನೇ ರದ್ದು ಅಥವಾ ಮುಂದೂಡಬೇಕೇ ಎಂಬ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಟೂರ್ನಿ ಸಂಘಟಿಸಿ ನಷ್ಟ ಅನುಭವಿಸುವುದಕ್ಕಿಂತ, ಟೂರ್ನಿ ನಡೆಸದೆ ನಷ್ಟದ ಪ್ರಮಾಣ ತಗ್ಗಿಸಿಕೊಳ್ಳಲು ಬಿಸಿಸಿಐ ಮುಂದಾದರೂ ಅಚ್ಚರಿ ಇಲ್ಲ.
ತಡೆಗಾಗಿ ಹೈಕೋರ್ಟ್ಗೆ ಅರ್ಜಿ
ಕರೊನಾ ಭೀತಿಯಿಂದಾಗಿ ಐಪಿಎಲ್ 13ನೇ ಆವೃತ್ತಿ ಸಂಘಟಿಸಲು ಬಿಸಿಸಿಐಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರ ಸೂಚನೆ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಬಿಸಿಸಿಐಗೆ ವಿಭಾಗೀಯ ಪೀಠ ನೋಟಿಸ್ ನೀಡಿದ್ದು, ವಿಚಾರಣೆಯನ್ನು ಮಾರ್ಚ್ 23ಕ್ಕೆ ಮುಂದೂಡಿದೆ.
ಕರೊನಾ ಕಾಡಿದ ಭಾರತೀಯ ಕ್ರೀಡೆಗಳು