

ನವದೆಹಲಿ: ಮಹಾಮಾರಿ ಕರೊನಾ ಸೋಂಕಿನ ಭೀತಿಯಿಂದಾಗಿ ದೇಶದಲ್ಲಿ ಕ್ರಿಕೆಟ್, ಟೆನಿಸ್ ಸಹಿತ ಮತ್ತಿತರ ಕ್ರೀಡೆಗಳ ಬಳಿಕ ಹಾಕಿ ಚಟುವಟಿಕೆಗಳೂ ಸಂಪೂರ್ಣ ಸ್ಥಗಿತಗೊಂಡಿವೆ. ಏಪ್ರಿಲ್ 10ರ ನಂತರ ಆರಂಭಗೊಳ್ಳಬೇಕಾಗಿದ್ದ ಎಲ್ಲ ಜೂನಿಯರ್ ಮತ್ತು ಸಬ್-ಜೂನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ಗಳನ್ನು ಹಾಕಿ ಇಂಡಿಯಾ ಮುಂದೂಡಿದೆ. ಪರಿಸ್ಥಿತಿ ಸುಧಾರಣೆ ಕಂಡರೆ ಏಪ್ರಿಲ್ ಅಂತ್ಯದಲ್ಲಿ ಈ ಟೂರ್ನಿಗಳನ್ನು ಮರುನಿಗದಿ ಮಾಡುವ ಯೋಜನೆಯನ್ನೂ ಹಾಕಿ ಇಂಡಿಯಾ ಹಾಕಿಕೊಂಡಿದೆ. ಸೋಮವಾರ ನವದೆಹಲಿಯಲ್ಲಿ ನಡೆದ ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಎಂದು ಹಾಕಿ ಇಂಡಿಯಾದ ಅಧ್ಯಕ್ಷ ಮೊಹಮದ್ ಮುಸ್ತಾಕ್ ಅಹ್ಮದ್ ತಿಳಿಸಿದ್ದಾರೆ. ಹಾಕಿ ಇಂಡಿಯಾದ ಈ ನಿರ್ಧಾರದಿಂದಾಗಿ ಒಟ್ಟಾರೆ 8 ಟೂರ್ನಿಗಳು ಮುಂದೂಡಲ್ಪಟ್ಟಿವೆ. ಜಾರ್ಖಂಡ್, ತಮಿಳುನಾಡು, ಹರಿಯಾಣ, ಮಣಿಪುರದಲ್ಲಿ ನಡೆಯಬೇಕಾದ ಟೂರ್ನಿಗಳು ಇದಾಗಿವೆ. ಕರೊನಾ ಕಾಟದಿಂದಾಗಿ ರಾಷ್ಟ್ರೀಯ ತಂಡದ ಹಾಕಿ ಪ್ರೊ ಲೀಗ್ ಟೂರ್ನಿಯನ್ನು ಈಗಾಗಲೆ ಮುಂದೂಡಲಾಗಿದೆ.
ಮುಂದೂಡಲ್ಪಟ್ಟ ಹಾಕಿ ಟೂರ್ನಿಗಳು: ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ಷಿಪ್ (ಬಿ ಡಿವಿಷನ್): ರಾಂಚಿಯಲ್ಲಿ ಏಪ್ರಿಲ್ 10ರಿಂದ 20ರವರೆಗೆ ನಡೆಯಬೇಕಿದ್ದ ಟೂರ್ನಿ, ಏಪ್ರಿಲ್ 29ರಿಂದ ಮೇ 9ಕ್ಕೆ ಮರುನಿಗದಿ.
ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ (ಬಿ ಡಿವಿಷನ್): ಚೆನ್ನೈನಲ್ಲಿ ಏಪ್ರಿಲ್ 15ರಿಂದ 26ರವರೆಗೆ ನಡೆಯಬೇಕಾಗಿದ್ದ ಟೂರ್ನಿ, ಮೇ 14ರಿಂದ 21ರವರೆಗೆ ಮರುನಿಗದಿ.
ಸಬ್ ಜೂನಿಯರ್ ಮಹಿಳೆಯರ ರಾಷ್ಟ್ರೀಯ ಚಾಂಪಿಯನ್ಷಿಪ್ (ಬಿ ಡಿವಿಷನ್): ಹರಿಯಾಣದ ಹಿಸಾರ್ನಲ್ಲಿ ಏಪ್ರಿಲ್ 13ರಿಂದ 24ರವರೆಗೆ ನಡೆಯಬೇಕಾಗಿದ್ದ ಟೂರ್ನಿ, ಮೇ 3ರಿಂದ 14ರವರೆಗೆ ಮರುನಿಗದಿ.
ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ (ಎ ಡಿವಿಷನ್): ಚೆನ್ನೈನಲ್ಲಿ ಏಪ್ರಿಲ್ 10ರಿಂದ 17ರವರೆಗೆ ನಡೆಯಬೇಕಾಗಿದ್ದ ಟೂರ್ನಿ, ಮೇ 19ರಿಂದ 30ರವರೆಗೆ ಮರುನಿಗದಿ.
ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ಷಿಪ್ (ಎ ಡಿವಿಷನ್): ರಾಂಚಿಯಲ್ಲಿ ಏಪ್ರಿಲ್ 18ರಿಂದ 28ರವರೆಗೆ ನಡೆಯಬೇಕಾಗಿದ್ದ ಟೂರ್ನಿ, ಮೇ 7ರಿಂದ 17ರವರೆಗೆ ಮರುನಿಗದಿ.
ಸಬ್ ಜೂನಿಯರ್ ಮಹಿಳಾ ರಾಷ್ಟ್ರೀಯ ಚಾಂಪಿಯನ್ಷಿಪ್ (ಎ ಡಿವಿಷನ್): ಹಿಸಾರ್ನಲ್ಲಿ ಮರುನಿಗದಿ.
ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ (ಬಿ ಡಿವಿಷನ್): ಮಣಿಪುರದ ಇಂಪಾಲ್ನಲ್ಲಿ ಮೇ 7ರಿಂದ 17ರ ವರೆಗೆ ನಡೆಯಬೇಕಾಗಿದ್ದ ಟೂರ್ನಿ ಜೂನ್ 3ರಿಂದ 13ರವರೆಗೆ ಮರುನಿಗದಿ.
ಸಬ್ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್ಷಿಪ್ (ಎ ಡಿವಿಷನ್): ಇಂಪಾಲ್ನಲ್ಲಿ ಮೇ 7ರಿಂದ 17ರವರೆಗೆ ನಡೆಯಬೇಕಾಗಿದ್ದ ಟೂರ್ನಿ, ಜೂನ್ 3ರಿಂದ 13ರವರೆಗೆ ಮರುನಿಗದಿ. -ಪಿಟಿಐ