ನಿವೃತ್ತ ಕ್ರಿಕೆಟಿಗರಿಗೂ ಕೂಲಿಂಗ್​-ಆಫ್​​; ಬಿಸಿಸಿಐ ವಿರುದ್ಧ ರಾಬಿನ್​ ಉತ್ತಪ್ಪ ಅಸಮಾಧಾನ

uthappa web
Published on

ಮುಂಬೈ: ವಿದೇಶಿ ಟಿ20 ಲೀಗ್​ಗಳಲ್ಲಿ ಆಡುವ ಸಲುವಾಗಿ ಭಾರತದ ಹಿರಿಯ ಕ್ರಿಕೆಟಿಗರು ನಿವೃತ್ತಿ ಘೋಷಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಇದನ್ನು ತಡೆಗಟ್ಟಲು ಬಿಸಿಸಿಐ ಈಗ, ನಿವೃತ್ತಿಯ ಬೆನ್ನಲ್ಲೇ ವಿದೇಶಿ ಟಿ20 ಲೀಗ್​ಗಳಲ್ಲಿ ಆಡುವುದನ್ನು ನಿರ್ಬಂಧಿಸಲು ಮುಂದಾಗಿದೆ. ಆದರೆ ಬಿಸಿಸಿಐ, ನಿವೃತ್ತ ಕ್ರಿಕೆಟಿಗರಿಗೂ "ಕೂಲಿಂಗ್​-ಆಫ್​ ಅವಧಿ' ನಿಗದಿಪಡಿಸಲು ಮುಂದಾಗಿರುವುದಕ್ಕೆ ಟೀಮ್​ ಇಂಡಿಯಾದ ಮಾಜಿ ಬ್ಯಾಟರ್​ ಹಾಗೂ ಕನ್ನಡಿಗ ರಾಬಿನ್​ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಭಾರತದ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದ 37 ವರ್ಷದ ರಾಬಿನ್​ ಉತ್ತಪ್ಪ ಬಳಿಕ ವಿವಿಧ ವಿದೇಶಿ ಲೀಗ್​ಗಳಲ್ಲಿ ಆಡುತ್ತಿದ್ದಾರೆ. ಇತ್ತೀಚೆಗೆ ಜಿಂಬಾಬ್ವೆಯ ಟಿ10 ಲೀಗ್​ನಲ್ಲಿ ಆಡಿದ್ದರು. ಅದಕ್ಕೆ ಮುನ್ನ ಯುಎಇಯಲ್ಲಿ ಅಂತಾರಾಷ್ಟ್ರೀಯ ಲೀಗ್​ ಟಿ20 ಟೂರ್ನಿಯಲ್ಲಿ ಆಡಿದ್ದರು. ಇದೀಗ ನಿವೃತ್ತಿ ಪ್ರಕಟಿಸಿದ ನಿರ್ದಿಷ್ಟ ಅವಧಿಯವರೆಗೆ ಭಾರತದ ಕ್ರಿಕೆಟಿಗರು ವಿದೇಶಿ ಲೀಗ್​ಗಳಲ್ಲಿ ಆಡಬಾರದು ಎಂದು ಬಿಸಿಸಿಐ ನಿಯಮ ರೂಪಿಸಲು ಮುಂದಾಗಿದೆ. ಈ ನಿರ್ದಿಷ್ಟ ಅವಧಿ ಎಷ್ಟು ತಿಂಗಳು, ವರ್ಷ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

'ಬಿಸಿಸಿಐ ಇಂಥ ನಿಯಮ ಜಾರಿಗೆ ತಂದರೆ ಮಾಜಿ ಕ್ರಿಕೆಟಿಗರಿಗೆ ಕಿರಿಕಿರಿಯಾಗಲಿದೆ ಮತ್ತು ಇದು ನ್ಯಾಯಬದ್ಧವೂ ಅಲ್ಲ. ನಾವು ಬಿಸಿಸಿಐ ಜತೆಗೆ ಯಾವುದೇ ಕೇಂದ್ರಿಯ ಗುತ್ತಿಗೆ ಹೊಂದಿಲ್ಲ. ಭಾರತದಲ್ಲೂ ನಾವು ಕ್ರಿಕೆಟ್​ ಆಡುವುದಿಲ್ಲ. ಹೀಗಾಗಿ ಇದು ಸರಿಯಾದ ಕ್ರಮವಲ್ಲ' ಎಂದು ಉತ್ತಪ್ಪ ಜಿಯೋಸಿನಿಮಾದ ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಇದೇ ವೇಳೆ ಬಿಸಿಸಿಐ ಕ್ರಿಕೆಟಿಗರ ಬಗ್ಗೆ ಕಾಳಜಿ ವಹಿಸುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಉತ್ತಪ್ಪ, ಬಿಸಿಸಿಐ ಏನೇ ನಿರ್ಧಾರ ತೆಗೆದುಕೊಂಡರೂ ಅದು ಭಾರತೀಯ ಕ್ರಿಕೆಟ್​ನ ಹಿತದೃಷ್ಟಿಯಿಂದಲೇ ಆಗಿರುತ್ತದೆ ಎಂದಿದ್ದಾರೆ. ಕರ್ನಾಟಕದ ಮಾಜಿ ಬ್ಯಾಟರ್​ ಉತ್ತಪ್ಪ ಭಾರತ ತಂಡದ ಪರ 46 ಏಕದಿನ ಮತ್ತು 13 ಟಿ20 ಪಂದ್ಯ ಆಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net