

ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2027ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ವಿಶ್ವಕಪ್ವರೆಗೆ ಏಕದಿನ ಕ್ರಿಕೆಟ್ನಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿದ್ದಾರೆ. ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ ಏಕದಿನ ಕ್ರಿಕೆಟ್ನಿಂದ ಸದ್ಯಕ್ಕೆ ನಿರ್ಗಮಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ.
ಐಪಿಎಲ್ ಟೂರ್ನಿಯ ನಡುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವ ಕೊಹ್ಲಿಗೆ ನಿರೂಪಕಿ, ನಿಮ್ಮ ಮುಂದಿನ ದೊಡ್ಡ ಹೆಜ್ಜೆ ಏನು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಕೊಹ್ಲಿ, "ಗೊತ್ತಿಲ್ಲ, ಬಹುಶಃ ಮುಂದಿನ ವಿಶ್ವಕಪ್ ಗೆಲುವು ಆಗಿರಬಹುದು' ಎಂದು ಉತ್ತರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಂಗಳವಾರ ವೈರಲ್ ಆಗಿದ್ದು, ಕೊಹ್ಲಿ 2027ರ ವಿಶ್ವಕಪ್ವರೆಗೆ ಏಕದಿನ ಕ್ರಿಕೆಟ್ ಆಡುವುದು ಕೂಡ ಖಚಿತಗೊಂಡಿದೆ.
36 ವರ್ಷದ ಕೊಹ್ಲಿ, 2027ರ ವಿಶ್ವಕಪ್ ವೇಳೆ 39ನೇ ವರ್ಷಕ್ಕೆ ಕಾಲಿಡಲಿದ್ದಾರೆ. 2011ರಲ್ಲಿ ತಾನಾಡಿದ ಮೊದಲ ವಿಶ್ವಕಪ್ನಲ್ಲೇ ಪ್ರಶಸ್ತಿ ಗೆಲುವು ಕಂಡಿದ್ದ ಕೊಹ್ಲಿಗೆ 2027ರ ಆವೃತ್ತಿ 5ನೇ ವಿಶ್ವಕಪ್ ಆಗಿರಲಿದೆ. ಅಲ್ಲದೆ ಆಡಿದ ಮೊದಲ ಮತ್ತು ಕೊನೇ ವಿಶ್ವಕಪ್ನಲ್ಲಿ ಪ್ರಶಸ್ತಿ ಗೆದ್ದ ವಿಶೇಷ ಸಾಧನೆಯ ಅವಕಾಶವೂ ಅವರಿಗೆ ಲಭಿಸಲಿದೆ. ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ 37 ಇನಿಂಗ್ಸ್ಗಳಲ್ಲಿ 1,795 ರನ್ ಗಳಿಸಿರುವ ಕೊಹ್ಲಿ, 2027ರ ಆವೃತ್ತಿಯಲ್ಲಿ 484 ರನ್ ಗಳಿಸಿದರೆ, ಸಚಿನ್ ತೆಂಡುಲ್ಕರ್ರನ್ನು (2,278) ಹಿಂದಿಕ್ಕಿ ವಿಶ್ವಕಪ್ನಲ್ಲಿ ಸರ್ವಾಧಿಕ ರನ್ ಗಳಿಸಿದ ದಾಖಲೆಯನ್ನೂ ಬರೆಯಬಹುದಾಗಿದೆ.