

ರಾಂಚಿ: ಪ್ರವಾಸಿ ಇಂಗ್ಲೆಂಡ್ ಎದುರು ಆರಂಭಿಕ ಪಂದ್ಯದ ಸೋಲಿನ ಬಳಿಕ ಸತತ ಎರಡು ಗೆಲುವಿನೊಂದಿಗೆ ಪುಟಿದೆದ್ದು ಬಂದಿರುವ ಭಾರತ ತಂಡ ಇದೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ರಾಜ್ಕೋಟ್ನಲ್ಲಿ ಆಂಗ್ಲರ ಬಾಜ್ಬಾಲ್ ಕಾರ್ಯತಂತ್ರವನ್ನು ಸಮರ್ಥವಾಗಿಯೇ ಸದೆಬಡಿದ ವಿಶ್ವಾಸದಲ್ಲಿರುವ ಭಾರತ ತಂಡ ಶುಕ್ರವಾರ ಆರಂಭಗೊಳ್ಳಲಿರುವ ಸರಣಿಯ 4ನೇ ಟೆಸ್ಟ್ನಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ. ಈ ಮೂಲಕ ರೋಹಿತ್ ಶರ್ಮ ಬಳಗ ಕಳೆದ 12 ವರ್ಷಗಳ ತವರಿನ ಪ್ರಾಬಲ್ಯವನ್ನು ಕಾಯ್ದುಕೊಳ್ಳುವ ತವಕದಲ್ಲಿದೆ.
ದಕ್ಷಿಣ ಭಾರತದ ಬಳಿಕ ಪಶ್ಚಿಮದತ್ತ ಸಾಗಿದ್ದ ಸರಣಿ ಈಗ ಪೂರ್ವ ಭಾಗಕ್ಕೆ ತಲುಪಿದೆ. ಕಳೆದ 3 ಪಂದ್ಯಗಳ ವೇಳೆ ಬಿಸಿಲಿನ ತಾಪ ಹೆಚ್ಚಿದ್ದರೆ, ರಾಂಚಿಯಲ್ಲಿ ಈಗ ತಂಪಾದ ವಾತಾವರಣವಿದೆ. ಇದು ಆಂಗ್ಲರಿಗೆ ಒಗ್ಗಿಕೊಳ್ಳಲು ಅನುಕೂಲಕರವೆನಿಸುವ ಭೀತಿ ಇದೆ. ಹೀಗಾಗಿ ಸದ್ಯ ಭಾರತ 2-1 ಮುನ್ನಡೆಯಲ್ಲಿರುವ ಸರಣಿಯಲ್ಲಿ ಆಂಗ್ಲರಿಂದ ತಿರುಗೇಟು ಎದುರಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಈಗಾಗಲೆ ವಿರಾಟ್ ಕೊಹ್ಲಿ, ಮೊಹಮದ್ ಶಮಿ ಸಂಪೂರ್ಣ ಸರಣಿ ತಪ್ಪಿಸಿಕೊಂಡಿದ್ದರೆ, ಕನ್ನಡಿಗ ಕೆಎಲ್ ರಾಹುಲ್ ಮೊದಲ ಪಂದ್ಯದ ಬಳಿಕ ಅಲಭ್ಯರಾಗಿದ್ದಾರೆ. ಶ್ರೇಯಸ್ ಅಯ್ಯರ್ ಫಾರ್ಮ್ನಲ್ಲಿಲ್ಲದೆ ಹೊರಬಿದ್ದಿದ್ದಾರೆ. ಇದರ ನಡುವೆ ಭಾರತ, ಸರಣಿಯಲ್ಲಿ ಈಗಾಗಲೆ 80ಕ್ಕೂ ಅಧಿಕ ಓವರ್ ಎಸೆದಿರುವ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಕಾರ್ಯದೊತ್ತಡ ತಗ್ಗಿಸಲು 4ನೇ ಟೆಸ್ಟ್ನಿಂದ ವಿಶ್ರಾಂತಿ ನೀಡಿದೆ. ಹೀಗಾಗಿ ಇದು ಭಾರತದ ಯುವ ಆಟಗಾರರಿಗೆ ಸಾಮರ್ಥ್ಯ ನಿರೂಪಿಸಲು ಇನ್ನಷ್ಟು ಉತ್ತಮ ಅವಕಾಶ ಒದಗಿಸಲಿದೆ.ಸರಣಿಯಲ್ಲಿ ಸತತ 2 ದ್ವಿಶತಕ ಸಹಿತ 545 ರನ್ ಕಲೆಹಾಕಿರುವ ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ಸ್ರಾರ್ಜ್ ಖಾನ್ರಂಥ ಯುವ ಆಟಗಾರರೇ ಭಾರತದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ.
ಸರಣಿಯಲ್ಲಿ ಭಾರತದ ಸ್ಪಿನ್ನರ್ಗಳು ನಿರೀತ ಮಟ್ಟದಲ್ಲಿ ಪ್ರಾಬಲ್ಯ ಸಾಧಿಸದಿರುವ ನಡುವೆ ಜಸ್ಪ್ರೀತ್ ಬುಮ್ರಾ 3 ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದರು. ಇದೀಗ ಅವರ ಗೈರಿನಲ್ಲೂ ಆಂಗ್ಲರಿಗೆ ಕಡಿವಾಣ ಹಾಕುವ ಸವಾಲು ಭಾರತದ ಮುಂದಿದೆ.
ಬಾಜ್ಬಾಲ್ಗೆ ಸವಾಲು
ರಾಜ್ಕೋಟ್ ಟೆಸ್ಟ್ನಲ್ಲಿ 434 ರನ್ಗಳಿಂದ ಹೀನಾಯವಾಗಿ ಸೋತ ಬಳಿಕ ಆಂಗ್ಲರ ಆಕ್ರಮಣಕಾರಿ ಬಾಜ್ಬಾಲ್ ಕಾರ್ಯತಂತ್ರಕ್ಕೆ ಟೀಕೆಗಳು ಎದುರಾಗಿವೆ. ತವರಿನ ಜತೆಗೆ ನ್ಯೂಜಿಲೆಂಡ್, ದ. ಆಫ್ರಿಕಾ, ಪಾಕಿಸ್ತಾನ, ಆಸ್ಟ್ರೆಲಿಯಾದಲ್ಲಿ ಗೆಲುವು ಕಂಡಿರುವ ಬಾಜ್ಬಾಲ್ಗೆ ಭಾರತದಲ್ಲಿ ಮೊದಲ ಟೆಸ್ಟ್ ಬಳಿಕ ಯಶಸ್ಸು ದೊರೆತಿಲ್ಲ. ಇನ್ನೀಗ ಸರಣಿ ವಶಪಡಿಸಿಕೊಳ್ಳಬೇಕಾದರೆ ಕೊನೇ ಎರಡೂ ಟೆಸ್ಟ್ ಗೆಲ್ಲಬೇಕಾದ ಒತ್ತಡ ಆಂಗ್ಲರ ಮೇಲಿದೆ. ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕರಾದ ಜಾಕ್ ಕ್ರೌಲಿ, ಬೆನ್ ಡಕೆಟ್, ಒಲಿ ಪೋಪ್ ಮಿಂಚಿದ್ದರೂ, ಅನುಭವಿಗಳಾದ ಜೋ ರೂಟ್ ಮತ್ತು ಜಾನಿ ಬೇರ್ಸ್ಟೋ ನಿರಾಸೆ ಮೂಡಿಸಿದ್ದಾರೆ. ಮಾಜಿ ನಾಯಕ ಜೋ ರೂಟ್ ಸರಣಿಯಲ್ಲಿ ಗಳಿಸಿರುವ ರನ್ಗಿಂತ (77), ಅರೆಕಾಲಿಕ ಬೌಲರ್ ಆಗಿ ಅಧಿಕ ಓವರ್ ಬೌಲಿಂಗ್ (107) ಮಾಡಿದ್ದಾರೆ. ಇನ್ನು ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡದಿರುವುದರಿಂದ, ನಾಲ್ವರು ತಜ್ಞ ಬೌಲರ್ಗಳೊಂದಿಗೆ ಆಡುತ್ತಿರುವ ಆಂಗ್ಲರ ಕಾರ್ಯತಂತ್ರಕ್ಕೆ ಹಿನ್ನಡೆಯಾಗಿದೆ. ಇದರಿಂದ ಸ್ಟೋಕ್ಸ್ ನೆಟ್ಸ್ನಲ್ಲಿ ಬೌಲಿಂಗ್ ಆರಂಭಿಸಿದ್ದು, ರಾಂಚಿಯಲ್ಲಿ ದಾಳಿಗೆ ಇಳಿದರೂ ಅಚ್ಚರಿ ಇಲ್ಲ.
ಟೀಮ್ ನ್ಯೂಸ್:
ಭಾರತ: ಸತತ 2 ಗೆಲುವಿನ ನಡುವೆಯೂ ಭಾರತ ತಂಡ ಆಡುವ 11ರ ಬಳಗದ ಆಯ್ಕೆಯಲ್ಲಿ ಕೆಲ ಗೊಂದಲಗಳನ್ನು ಎದುರಿಸುತ್ತಿದೆ. ಬುಮ್ರಾ ಸ್ಥಾನವನ್ನು ತುಂಬಲು ಬಂಗಾಳದ ವೇಗಿಗಳಾದ ಮುಕೇಶ್ ಕುಮಾರ್ ಮತ್ತು ಆಕಾಶ್ ದೀಪ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆಕಾಶ್ ದೀಪ್ ಗುರುವಾರ ನೆಟ್ಸ್ನಲ್ಲಿ ಹೆಚ್ಚಿನ ಬೆವರಿಳಿಸಿರುವುದರಿಂದ ಅವರೇ ಪದಾರ್ಪಣೆ ಅವಕಾಶ ಪಡೆಯುವ ಸಾಧ್ಯತೆ ಇದೆ. ಇನ್ನು ರಜತ್ ಪಾಟೀದಾರ್ ಕಳೆದೆರಡು ಟೆಸ್ಟ್ಗಳಲ್ಲಿ ನಿರಾಸೆ ಮೂಡಿಸಿದ್ದರೂ, ಮತ್ತೆ 3ನೇ ಅವಕಾಶ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಟೆಸ್ಟ್ ಪದಾರ್ಪಣೆಗೆ ಇನ್ನಷ್ಟು ಸಮಯ ಕಾಯಬೇಕಾಗಬಹುದು.
ಇಂಗ್ಲೆಂಡ್: ಸತತ 4ನೇ ಸಲವೂ ಪಂದ್ಯಕ್ಕೆ ಮುನ್ನಾದಿನವೇ ಇಂಗ್ಲೆಂಡ್ ಆಡುವ 11ರ ಬಳಗವನ್ನು ಪ್ರಕಟಿಸಿದೆ. ರಾಜ್ಕೋಟ್ನಲ್ಲಿ ಹೀನಾಯವಾಗಿ ಸೋತ ತಂಡದಲ್ಲಿ 2 ಬದಲಾವಣೆ ಮಾಡಿರುವ ಇಂಗ್ಲೆಂಡ್ ತಂಡ, ವೇಗಿ ಒಲಿ ರಾಬಿನ್ಸನ್ರನ್ನು ಸರಣಿಯಲ್ಲಿ ಮೊದಲ ಬಾರಿ ಆಡಿಸಲು ಮುಂದಾಗಿದೆ. ಅವರಿಗೆ ಮಾರ್ಕ್ ವುಡ್ ಸ್ಥಾನ ಬಿಟ್ಟುಕೊಡಲಿದ್ದಾರೆ. ಇನ್ನು ರಾಜ್ಕೋಟ್ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ ಜೈಸ್ವಾಲ್ರಿಂದ ತೀವ್ರ ದಂಡನೆಗೆ ಒಳಗಾದ ರೆಹನ್ ಅಹ್ಮದ್ ಬದಲಿಗೆ ಮತ್ತೋರ್ವ ಸ್ಪಿನ್ನರ್ ಶೋಯಿಬ್ ಬಶೀರ್ ಮರಳಿ ಕಣಕ್ಕಿಳಿಯಲಿದ್ದಾರೆ. ಕಳೆದ 3 ಟೆಸ್ಟ್ಗಳಲ್ಲಿ ಒಮ್ಮೆಯೂ 40ರ ಗಡಿ ದಾಟದಿರುವ ನಡುವೆಯೂ ಜಾನಿ ಬೇರ್ಸ್ಟೋ ಸ್ಥಾನ ಉಳಿಸಿಕೊಂಡಿದ್ದಾರೆ.
*ಪಂದ್ಯ ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
ಸತತ 17ನೇ ಸರಣಿ ಜಯದ ಗುರಿ
ಭಾರತ ತಂಡ ರಾಂಚಿಯಲ್ಲಿ ಗೆದ್ದರೆ ತವರಿನಲ್ಲಿ ಸತತ 17 ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ. ಭಾರತ ತಂಡ 2012ರಲ್ಲಿ ಇಂಗ್ಲೆಂಡ್ ವಿರುದ್ಧವೇ ಕೊನೆಯದಾಗಿ ತವರಿನಲ್ಲಿ ಟೆಸ್ಟ್ ಸರಣಿ ಸೋತಿತ್ತು. ನಂತರದಲ್ಲಿ ಆಸ್ಟ್ರೆಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ 3 ಬಾರಿ, ದಣ ಆಫ್ರಿಕಾ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ತಲಾ 2 ಬಾರಿ ಸರಣಿ ಜಯಿಸಿದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ವಿರುದ್ಧ ತಲಾ 1 ಬಾರಿ ಸರಣಿ ಗೆದ್ದಿದೆ.
*2: ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ಭಾರತ ಇದುವರೆಗೆ 2 ಟೆಸ್ಟ್ ಆಡಿದ್ದು, 2019ರಲ್ಲಿ ದ. ಆಫ್ರಿಕಾ ವಿರುದ್ಧ ಇನಿಂಗ್ಸ್ ಗೆಲುವು ಸಾಧಿಸಿದ್ದರೆ, 2017ರಲ್ಲಿ ಆಸೀಸ್ ಎದುರು ಡ್ರಾಕ್ಕೆ ತೃಪ್ತಿಪಟ್ಟಿತ್ತು.
47: 2012ರಲ್ಲಿ ಆಂಗ್ಲರಿಗೆ ಕೊನೆಯದಾಗಿ ಸರಣಿ ಸೋತ ಬಳಿಕ ಭಾರತ ತಂಡ ತವರಿನಲ್ಲಿ ಆಡಿರುವ 47 ಟೆಸ್ಟ್ಗಳಲ್ಲಿ 38ರಲ್ಲಿ ಗೆದ್ದಿದ್ದು, 3ರಲ್ಲಿ ಮಾತ್ರ ಸೋತಿದೆ.
ಪಂದ್ಯಕ್ಕೆ ಮಳೆ ಭೀತಿ
ರಾಂಚಿ ಪಿಚ್ ಸರಣಿಯ ಹಿಂದಿನ ಪಂದ್ಯಗಳಿಗಿಂತ ಹೆಚ್ಚಾಗಿ ಸ್ಪಿನ್ನರ್ಗಳಿಗೆ ಸಹಕರಿಸುವ ಸಾಧ್ಯತೆ ಇದೆ. ಬುಮ್ರಾ ಗೈರಿನಲ್ಲಿ ಭಾರತ ಈ ಕಾರ್ಯತಂತ್ರ ಅನುಸರಿಸುವ ನಿರೀಕ್ಷೆ ಇತ್ತು. ಈ ನಡುವೆ ಪಂದ್ಯದ 3 ಮತ್ತು 5ನೇ ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿಯೂ ಇದೆ.