ಯುಎಸ್​ ಓಪನ್​ ಮಹಿಳಾ ಸಿಂಗಲ್ಸ್​​​ನಲ್ಲಿ ಫೈನಲ್​ಗೇರಿದ ಸಬಲೆಂಕಾ, ಕೋಕೋ ಗೌಫ್​

us open web
Published on

ನ್ಯೂಯಾರ್ಕ್​: ವರ್ಷದ ಎರಡನೇ ಗ್ರಾಂಡ್​ ಸ್ಲಾಂ ಪ್ರಶಸ್ತಿ ಗೆಲ್ಲುವ ಹಂಬಲದಲ್ಲಿರುವ ಬೆಲಾರಸ್​ ತಾರೆ ಅರಿನಾ ಸಬಲೆಂಕಾ ಮತ್ತು ತವರು ನೆಲದಲ್ಲಿ ಚೊಚ್ಚಲ ಗ್ರಾಂಡ್​ ಸ್ಲಾಂ ಪ್ರಶಸ್ತಿ ಕನಸು ನನಸಾಗಿಸುವ ತವಕದಲ್ಲಿರುವ ಆತಿಥೇಯರ ಯುವ ಆಶಾಕಿರಣ ಕೋಕೋ ಗೌಫ್​ ಯುಎಸ್​ ಓಪನ್​ ಟೆನಿಸ್​ ಟೂರ್ನಿಯ ಮಹಿಳಾ ಸಿಂಗಲ್ಸ್​ ವಿಭಾಗದ ಫೈನಲ್​ ಪಂದ್ಯದಲ್ಲಿ ಶನಿವಾರ (ಭಾರತೀಯ ಕಾಲಮಾನ ಪ್ರಕಾರ ಭಾನುವಾರ) ಮುಖಾಮುಖಿ ಆಗಲಿದ್ದಾರೆ.

2ನೇ ಶ್ರೇಯಾಂಕಿತೆ ಹಾಗೂ ಭಾವಿ ವಿಶ್ವ ನಂ. 1 ಸಬಲೆಂಕಾ, ಆರ್ಥರ್​ ಆಶ್​ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸೆಮಿಫೈನಲ್​ ಪಂದ್ಯದಲ್ಲಿ ಆತಿಥೇಯ ಅಮೆರಿಕದ ಆಟಗಾರ್ತಿ ಮ್ಯಾಡಿಸನ್​ ಕೀಯ್ಸ್​ ಎದುರು 0-6, 7-6 (7-1), 7-6 (10-5) ಅಂತರದಿಂದ ರೋಚಕ ಗೆಲುವು ದಾಖಲಿಸಿದರು. ಆಸ್ಟ್ರೆಲಿಯನ್​ ಓಪನ್​ ಚಾಂಪಿಯನ್​ ಸಬಲೆಂಕಾಗೆ ನ್ಯೂಯಾರ್ಕ್​ನಲ್ಲಿ ಇದು ಮೊದಲ ಫೈನಲ್​ ಪ್ರವೇಶವಾಗಿದೆ.

ಮೊದಲ ಸೆಟ್​ನಲ್ಲಿ ಒಂದೂ ಗೇಮ್​ ಗೆಲ್ಲದೆ 30 ನಿಮಿಷಗಳಲ್ಲೇ ಪರಾಭವಗೊಂಡ 25 ವರ್ಷದ ಸಬಲೆಂಕಾ ನಂತರದ 2 ಸೆಟ್​ಗಳ ಟೈಬ್ರೇಕರ್​ನಲ್ಲಿ ದಿಟ್ಟ ತಿರುಗೇಟು ನೀಡುವಲ್ಲಿ ಸಫಲರಾದರು. ಸಬಲೆಂಕಾ ಗೆಲುವಿಗಾಗಿ 2 ಗಂಟೆ 32 ನಿಮಿಷಗಳ ಕಾಲ ಶ್ರಮಿಸಿದರು. ಇದೀಗ ವಿಶ್ವ ನಂ. 1 ಪಟ್ಟವನ್ನು ಪ್ರಶಸ್ತಿ ಗೆಲುವಿನೊಂದಿಗೆ ಸಂಭ್ರಮಿಸುವ ಅವಕಾಶ ಅವರ ಮುಂದಿದೆ. 2017ರ ನಂತರ ಮತ್ತೊಮ್ಮೆ ಯುಎಸ್​ ಓಪನ್​ ಫೈನಲ್​ ಪ್ರವೇಶಿಸುವ ಮ್ಯಾಡಿಸನ್​ ಕೀಯ್ಸ್​ ಪ್ರಯತ್ನ ಫಲ ನೀಡಲಿಲ್ಲ. ಇದರಿಂದ ಆಲ್​ ಅಮೆರಿಕನ್​ ಫೈನಲ್​ ಪಂದ್ಯವೂ ತಪ್ಪಿತು.

ಗೌಫ್​ಗೆ ಮಣಿದ ಮುಚೋವಾ

ಆರನೇ ಶ್ರೇಯಾಂಕಿತೆ ಕೋಕೋ ಗೌಫ್​ ಸೆಮಿಫೈನಲ್​ ಪಂದ್ಯದಲ್ಲಿ ಜೆಕ್​ ಗಣರಾಜ್ಯದ ಕ್ಯಾರೊಲಿನಾ ಮುಚೋವಾ ಎದುರು 6-4, 7-5ರಿಂದ ಗೆಲುವು ದಾಖಲಿಸಿದರು. ನೇರಸೆಟ್​ಗಳಲ್ಲಿ ಗೆಲುವು ಕಂಡರೂ, 19 ವರ್ಷದ ಗೌಫ್ ಗೆಲುವಿಗಾಗಿ 2 ಗಂಟೆ 3 ನಿಮಿಷಗಳ ಕಾಲ ಹೋರಾಡಿದರು. 5 ಮ್ಯಾಚ್​ ಪಾಯಿಂಟ್​ಗಳನ್ನು ಅವರು ಕೈಚೆಲ್ಲಿದ್ದು ಇದಕ್ಕೆ ಕಾರಣ. 10ನೇ ಶ್ರೇಯಾಂಕಿತೆ ಮುಚೋವಾ 2ನೇ ಸೆಟ್​ನಲ್ಲಿ ನಿಕಟ ಪ್ರತಿರೋಧವನ್ನೇ ತೋರಿದರು. ಕಳೆದ ವರ್ಷ ಫ್ರೆಂಚ್​ ಓಪನ್ ಫೈನಲ್​ಗೇರಿ ರನ್ನರ್​ಅಪ್​ ಆಗಿದ್ದ ಗೌಫ್​ಗೆ ತವರಿನ ಗ್ರಾಂಡ್​ ಸ್ಲಾಂನಲ್ಲಿ ಇದು ಚೊಚ್ಚಲ ಫೈನಲ್​ ಪ್ರವೇಶವಾಗಿದೆ. 19 ವರ್ಷದ ಗೌಫ್​, ಸೆರೇನಾ ವಿಲಿಯಮ್ಸ್​ (1999) ಬಳಿಕ ಯುಎಸ್​ ಓಪನ್ ಫೈನಲ್​ಗೇರಿದ ಅತ್ಯಂತ ಕಿರಿಯ ಆತಿಥೇಯ ಆಟಗಾರ್ತಿ ಎನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net