

ನವದೆಹಲಿ: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿದ್ದು ಎಲ್ಲರಿಗೂ ಗೊತ್ತೇ ಇದೆ. ದೇಶದ ಕ್ರೀಡಾಭಿಮಾನಿಗಳು ಇನ್ನೂ ಕೂಡ ಅದರ ಗುಂಗಿನಲ್ಲಿ ಮುಳುಗಿದ್ದಾರೆ. ವೆಸ್ಟ್ಇಂಡೀಸ್ನಲ್ಲಿ ವಿಶ್ವಕಪ್ ಗೆದ್ದು ತವರಿಗೆ ಮರಳಿದ ಟೀಮ್ ಇಂಡಿಯಾ ಆಟಗಾರರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಅಲ್ಲದೆ, ಬಿಸಿಸಿಐ ಸನ್ಮಾನ ಸಹ ಮಾಡಿತು. ಇದರೊಂದಿಗೆ 125 ಕೋಟಿ ರೂ. ಬಹುಮಾನ ಸಹ ಘೋಷಣೆ ಮಾಡಿದೆ.
ಸದ್ಯ ವಿಶ್ವಕಪ್ ಚಾಂಪಿಯನ್ಗಳು ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ. ತವರಿನಲ್ಲೂ ಸಹ ಆತ್ಮೀಯ ಸ್ವಾಗತವನ್ನು ಸ್ವೀಕರಿಸುತ್ತಿದ್ದಾರೆ. ಹೈದರಾಬಾದ್ ಸ್ಪೀಡ್ ಗನ್ ಮೊಹಮ್ಮದ್ ಸಿರಾಜ್ ಭಾಗ್ಯನಗರಕ್ಕೆ ಬಂದಿಳಿದಿರುವುದು ಎಲ್ಲರಿಗೂ ಗೊತ್ತಿದೆ. ಹೈದರಾಬಾದ್‌ನ ಜನರು ಸಿರಾಜ್‌ಗೆ ಆತ್ಮೀಯ ಆಹ್ವಾನ ನೀಡಿದರು. ಬೃಹತ್ ರ್ಯಾಲಿಯನ್ನು ಸಹ ನಡೆಸಲಾಯಿತು.
ತಾಜಾ ಸಂಗತಿ ಏನೆಂದರೆ, ಇತ್ತೀಚೆಗಷ್ಟೇ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ಸಿರಾಜ್ ಭೇಟಿ ಮಾಡಿದ್ದರು. ತಾವು ಗೆದ್ದ ಪದಕವನ್ನು ಸಿಎಂಗೆ ತೋರಿಸಿದರು. ಅಲ್ಲದೆ, ತಮ್ಮ ಜೆರ್ಸಿಯನ್ನು ಸಿಎಂಗೆ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಸಿಎಂ ರೇವಂತ್ ರೆಡ್ಡಿ ಸಿರಾಜ್ ಅವರಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ.
ಶಾಲು ಹೊದಿಸಿ ಸಿರಾಜ್ ಅವರನ್ನು ಸನ್ಮಾನಿಸಿದ ರೇವಂತ್ ರೆಡ್ಡಿ, ಗುಡ್ ನ್ಯೂಸ್ ಕೂಡ ನೀಡಿದ್ದಾರೆ. ಸಿರಾಜ್‌ಗೆ ಮನೆ ನೀಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಸಿರಾಜ್‌ಗೆ ಒಳ್ಳೆಯ ಮನೆ ಸಿಗಬೇಕು ಎಂದು ಸ್ವತಃ ಸಿಎಂ ರೇವಂತ್ ರೆಡ್ಡಿ, ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಸಿರಾಜ್‌ಗೆ ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿರಾಜ್ ಅವರೊಂದಿಗೆ ಸಚಿವ ಕೋಮಟಿರೆಡ್ಡಿ, ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಮತ್ತು ಟೀಂ ಇಂಡಿಯಾದ ಮಾಜಿ ಲೆಜೆಂಡರಿ ಆಟಗಾರ ಅಜರುದ್ದೀನ್ ಕೂಡ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶ್ವಕಪ್ ಹೀರೋಗಳಿಗೆ ಬಿಸಿಸಿಐ 125 ಕೋಟಿ ರೂ.ಗಳನ್ನು ಘೋಷಿಸಿದೆ. ಈ ಬಹುಮಾನದಲ್ಲಿ ಸಿರಾಜ್ 5 ಕೋಟಿ ರೂ. ಪಾಲು ಪಡೆಯಲಿದ್ದಾರೆ. ಬಿಸಿಸಿಐ ಎಲ್ಲಾ 15 ಆಟಗಾರರಿಗೆ ತಲಾ ರೂ.5 ಕೋಟಿ ನೀಡಲಿದೆ. ಅಲ್ಲದೆ, ಇದೀಗ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಘೋಷಣೆಯಿಂದ ಸಿರಾಜ್‌ಗೆ ಹೈದರಾಬಾದ್‌ನಲ್ಲಿ ಮನೆ ಮತ್ತು ಸರ್ಕಾರಿ ಉದ್ಯೋಗವೂ ಸಿಗಲಿದೆ. (ಏಜೆನ್ಸೀಸ್)