ಭಾರತಕ್ಕೆ 8 ವರ್ಷಗಳ ಬಳಿಕ ಒಲಿದ ಏಷ್ಯಾಕಪ್ ಹಾಕಿ​ ಕಿರೀಟ; ಡಬಲ್​ ಖುಷಿ ತಂದ ವಿಶ್ವಕಪ್​ ಟಿಕೆಟ್​

web hock
Published on

ರಾಜ್​ಗಿರ್​ (ಬಿಹಾರ): ಅಮೋಘ ಗೆಲುವಿನ ಓಟ ಮುಂದುವರಿಸಿದ ಭಾರತ ತಂಡ 12ನೇ ಆವೃತ್ತಿಯ ಪುರುಷರ ಏಷ್ಯಾಕಪ್​ ಹಾಕಿ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಮೂಲಕ ಹರ್ಮಾನ್​ಪ್ರೀತ್​ ಸಿಂಗ್​ ಪಡೆ ಮುಂದಿನ ವರ್ಷದ ಹಾಕಿ ವಿಶ್ವಕಪ್​ಗೆ ನೇರ ಅರ್ಹತೆ ಒಲಿಸಿಕೊಂಡಿದೆ.

ಪ್ಯಾರಿಸ್​ ಒಲಿಂಪಿಕ್ಸ್​ ಕಂಚು ವಿಜೇತ ಭಾರತ ತಂಡ ಭಾನುವಾರ ನಡೆದ ಫೈನಲ್​ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳಿಂದ ಗೆಲುವು ದಾಖಲಿಸಿತು. ಇದರೊಂದಿಗೆ ಭಾರತ ಏಷ್ಯಾಕಪ್​ನಲ್ಲಿ 4ನೇ ಬಾರಿ ಮತ್ತು 8 ವರ್ಷಗಳ ಬಳಿಕ ಪ್ರಶಸ್ತಿ ಗೆದ್ದ ಸಾಧನೆ ಮೆರೆಯಿತು.

ಬಿಹಾರ್​ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನಲ್ಲಿ ನಡೆದ ಪಂದ್ಯದ ಮೊದಲಾರ್ಧದಲ್ಲೇ ಭಾರತ 2-0 ಮುನ್ನಡೆ ಸಾಧಿಸಿತು. 9ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಸ್ಟೋಕ್​ಅನ್ನು ಜುಗ್ರಾಜ್​ ಸಿಂಗ್​ ವ್ಯರ್ಥಗೊಳಿಸದಿದ್ದರೆ ಭಾರತ ಇನ್ನಷ್ಟು ಮುನ್ನಡೆ ಸಾಧಿಸಬಹುದಾಗಿತ್ತು. ಸುಖ್​ಜೀತ್​ ಸಿಂಗ್​ ಪಂದ್ಯ ಆರಂಭಗೊಂಡ 31 ಸೆಕೆಂಡ್​ಗಳಲ್ಲೇ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮೊದಲ ನಿಮಿಷದಿಂದಲೇ ಮುನ್ನಡೆ ಒದಗಿಸಿದರು. ನಂತರ ದಿಲ್​ಪ್ರೀತ್​ ಸಿಂಗ್​ 28 ಮತ್ತು 45ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಭಾರತದ ಮೊದಲ 3 ಫೀಲ್ಡ್​ ಗೋಲುಗಳಾಗಿದ್ದವು. ನಂತರ ಅಮಿತ್​ ರೋಹಿದಾಸ್​ (50) ಮತ್ತೊಂದು ಗೋಲು ಬಾರಿಸಿದರು. ಡೈನ್​ ಸನ್​ 51ನೇ ನಿಮಿಷದಲ್ಲಿ ಗಳಿಸಿದ ಗೋಲು ದಣ ಕೊರಿಯಾದ ಸೋಲಿನ ಅಂತರ ತಗ್ಗಿಸಿತು.

ಭಾರತ ಇದೇ ಮೊದಲ ಬಾರಿಗೆ ಜೂನಿಯರ್​ ಏಷ್ಯಾಕಪ್​, ಸೀನಿಯರ್​ ಏಷ್ಯಾಕಪ್​, ಏಷ್ಯನ್​ ಚಾಂಪಿಯನ್ಸ್​ ಟ್ರೋಫಿ ಮತ್ತು ಏಷ್ಯನ್​ ಗೇಮ್ಸ್​ನಲ್ಲಿ ಏಕಕಾಲದಲ್ಲಿ ಚಾಂಪಿಯನ್​ ಪಟ್ಟಕ್ಕೇರಿದ ಸಾಧನೆ ಮಾಡಿದೆ.

10 ದಿನಗಳಲ್ಲಿ 6 ಜಯ

ಭಾರತ ತಂಡ ಏಷ್ಯಾಕಪ್​ನಲ್ಲಿ 10 ದಿನಗಳ ಅಂತರದಲ್ಲಿ 7 ಪಂದ್ಯಗಳನ್ನು ಆಡಿತು. ಈ ಪೈಕಿ 6ರಲ್ಲಿ ಜಯಿಸಿದರೆ, 1 ಪಂದ್ಯದಲ್ಲಿ ಡ್ರಾ ಸಾಧಿಸಿತು. ಇದರಲ್ಲಿ ಒಟ್ಟಾರೆ 39 ಗೋಲು ಬಾರಿಸಿದರೆ, 9 ಗೋಲು ಬಿಟ್ಟುಕೊಟ್ಟಿತು. ಭಾರತ ಪರ ಅಭಿಷೇಕ್​, ಸುಖ್​ಜೀತ್​ ಸಿಂಗ್​ ಮತ್ತು ಹರ್ಮಾನ್​ಪ್ರೀತ್​ ಸಿಂಗ್​ ಗರಿಷ್ಠ ತಲಾ 6 ಗೋಲು ಬಾರಿಸಿದರು.

*4: ಭಾರತ 4ನೇ ಬಾರಿಗೆ ಏಷ್ಯಾಕಪ್​ ಹಾಕಿ ಪ್ರಶಸ್ತಿ ಜಯಿಸಿತು. ಈ ಮುನ್ನ 2003, 2007 ಮತ್ತು 2017ರಲ್ಲಿ ಈ ಸಾಧನೆ ಮಾಡಿತ್ತು.

7ನೇ ತಂಡವಾಗಿ ವಿಶ್ವಕಪ್​ ಅರ್ಹತೆ

ಮುಂದಿನ ವರ್ಷದ 16ನೇ ಆವೃತ್ತಿಯ ಎಫ್​ಐಎಚ್​ ಹಾಕಿ ವಿಶ್ವಕಪ್​ ಟೂರ್ನಿ ಬೆಲ್ಜಿಯಂ-ನೆದರ್ಲೆಂಡ್​ ಜಂಟಿ ಆಶ್ರಯದಲ್ಲಿ ಆಗಸ್ಟ್​ 14ರಿಂದ 30ರವರೆಗೆ ನಡೆಯಲಿದೆ. 16 ತಂಡಗಳು ಭಾಗವಹಿಸಲಿರುವ ಟೂರ್ನಿಗೆ ಭಾರತ 7ನೇ ತಂಡವಾಗಿ ನೇರ ಅರ್ಹತೆ ಖಚಿತಪಡಿಸಿಕೊಂಡಿದೆ. ಏಷ್ಯಾಕಪ್​ ಗೆಲ್ಲದಿದ್ದರೆ ಭಾರತ ವಿಶ್ವಕಪ್​ ಅರ್ಹತೆಯ ಕೊನೇ ಅವಕಾಶಕ್ಕಾಗಿ ಮುಂದಿನ ವರ್ಷ ಫೆಬ್ರವರಿ 28ರಿಂದ ಮಾರ್ಚ್​ವರೆಗೆ ಅರ್ಹತಾ ಟೂರ್ನಿಯಲ್ಲಿ ಆಡಬೇಕಾಗುತಿತ್ತು.

*2: ಭಾರತ 4 ಬಾರಿ ಏಷ್ಯಾಕಪ್​ ಹಾಕಿ ಪ್ರಶಸ್ತಿ ಗೆದ್ದ 2ನೇ ತಂಡವೆನಿಸಿತು. ದ. ಕೊರಿಯಾ 5 ಬಾರಿ ಗೆದ್ದಿರುವುದು ಗರಿಷ್ಠವಾಗಿದೆ.

ಪ್ರಧಾನಿ ಅಭಿನಂದನೆ

ಏಷ್ಯಾಕಪ್​ ಗೆದ್ದ ಭಾರತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಇದು ಭಾರತೀಯ ಹಾಕಿ ಮತ್ತು ಕ್ರೀಡೆಯ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.

ಹಾಕಿ ಇಂಡಿಯಾ ಬಹುಮಾನ

ಏಷ್ಯಾಕಪ್​ ವಿಜೇತ ಭಾರತ ತಂಡದ ಆಟಗಾರರಿಗೆ ತಲಾ 3 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1.5 ಲಕ್ಷ ರೂ. ಬಹುಮಾನವನ್ನು ಹಾಕಿ ಇಂಡಿಯಾ ಪ್ರಕಟಿಸಿದೆ.

ಮಲೇಷ್ಯಾಕ್ಕೆ ಕಂಚಿನ ಪದಕ

ಮಲೇಷ್ಯಾ ತಂಡ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೀನಾ ವಿರುದ್ಧ 4&1 ಗೋಲುಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಮಲೇಷ್ಯಾ ಕೂಟದಲ್ಲಿ 2ನೇ ಬಾರಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತು. ಪಂದ್ಯದಲ್ಲಿ 2 ಗೋಲು ಸಿಡಿಸಿದ ಮಲೇಷ್ಯಾದ ಅಖಿಮುಲ್ಲಾ ಅನೌರ್​ ಟೂರ್ನಿಯಲ್ಲಿ ಸರ್ವಾಧಿಕ 12 ಗೋಲು ಬಾರಿಸಿದ ಸಾಧನೆ ಮಾಡಿದರು.

13ಕ್ಕೆ ಜೂ. ವಿಶ್ವಕಪ್​ ಆಯ್ಕೆ ಟ್ರಯಲ್ಸ್​

ಮುಂಬರುವ ಜೂನಿಯರ್​ ಹಾಕಿ ವಿಶ್ವಕಪ್​ ಟೂರ್ನಿಗೆ ಭಾರತ ತಂಡದ ಆಯ್ಕೆ ಟ್ರಯಲ್ಸ್​ ಸೆಪ್ಟೆಂಬರ್​ 13ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹಾಕಿ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಆರ್​ಪಿ ಸಿಂಗ್​ ತಿಳಿಸಿದ್ದಾರೆ. ಇತ್ತೀಚೆಗಿನ ಯುರೋಪ್​ ಪ್ರವಾಸ ಮತ್ತು ಹಾಲಿ ರಾಷ್ಟ್ರೀಯ ಶಿಬಿರದ ನಿರ್ವಹಣೆಯನ್ನೂ ಗಮನಿಸಿ ತಂಡವನ್ನು ಅಂತಿಮಗೊಳಿಸಲಾಗುವುದು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net