ಟೆನಿಸ್‌ಗೆ ಮರಳ್ತಾರಂತೆ ಮೂರು ಮಕ್ಕಳ ಅಮ್ಮ!

KIM_01_WEB
Published on

ಬ್ರುಸೆಲ್ಸ್ (ಬೆಲ್ಜಿಯಂ): ಸೆರೇನಾ ವಿಲಿಯಮ್ಸ್, ಸಾನಿಯಾ ಮಿರ್ಜಾರಂಥ ಟೆನಿಸ್ ತಾರೆಯರು ಒಂದೊಂದು ಮಗುವನ್ನು ಹೆತ್ತು, ಮರಳಿ ಅಂಗಣಕ್ಕೆ ಇಳಿದಾಗ ಅಭಿಮಾನಿಗಳು ಅವರ ಕ್ರೀಡೋತ್ಸಾಹಕ್ಕೆ ತಲೆಬಾಗಿದ್ದರು. ಅವರೆಲ್ಲರನ್ನೂ ಮೀರಿಸಿ, ಇಲ್ಲೊಬ್ಬರು ಮೂರು ಮಕ್ಕಳ ತಾಯಿ ಮರಳಿ ಟೆನಿಸ್ ಅಂಗಣಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ಅವರೇ ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್‌!

ನಾಲ್ಕು ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿ ಕ್ಲೈಸ್ಟರ್ಸ್‌, ಕರೊನಾ ವೈರಸ್ ಹಾವಳಿಯ ನಡುವೆಯೂ ಟೆನಿಸ್ ಕೋರ್ಟ್‌ಗೆ ಮರಳುವ ಆಸೆಯನ್ನು ಬಿಟ್ಟುಕೊಟ್ಟಿಲ್ಲ. ‘ನಾನು ಈಗಲೂ ಉತ್ಸಾಹದಿಂದ ಇದ್ದೇನೆ. ಈ ವರ್ಷವೇ ಮತ್ತೆ ಆಡುವ ಭರವಸೆ ಹೊಂದಿದ್ದೇನೆ’ ಎಂದು ಕ್ಲೈಸ್ಟರ್ಸ್‌ ಬೆಲ್ಜಿಯಂ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಅಂದಹಾಗೆ, 37 ವರ್ಷದ ಕ್ಲೈಸ್ಟರ್ಸ್‌ ನಿವೃತ್ತಿ ಹಿಂಪಡೆದು ಸ್ಪರ್ಧಾತ್ಮಕ ಟೆನಿಸ್‌ಗೆ ಮರಳುತ್ತಿರುವುದು ಇದೇ ಮೊದಲೇನಲ್ಲ. 2005ರ ಯುಎಸ್ ಓಪನ್‌ನಲ್ಲಿ ಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ಬಳಿಕ ಕ್ಲೈಸ್ಟರ್ಸ್‌ 2007ರಲ್ಲಿ ನಿವೃತ್ತಿ ಹೊಂದಿದ್ದರು. ಅಮೆರಿಕದ ಬಾಸ್ಕೆಟ್‌ಬಾಲ್ ಕೋಚ್ ಹಾಗೂ ಮಾಜಿ ಆಟಗಾರ ಬ್ರಿಯಾನ್ ಲಿಂಚ್‌ರನ್ನು ವರಿಸಿದ ಬಳಿಕ ಈ ನಿರ್ಧಾರ ಕೈಗೊಂಡಿದ್ದ ಕ್ಲೈಸ್ಟರ್ಸ್‌, 2008ರಲ್ಲಿ ಪುತ್ರಿ ಜಾಡಾಗೆ ಜನ್ಮ ನೀಡಿದ್ದರು. ಅದರ ಮರುವರ್ಷವೇ ಅಂದರೆ 2009ರಲ್ಲಿ ಮತ್ತೆ ಟೆನಿಸ್‌ಗೆ ಮರಳಿದ್ದ ಅವರು, ಅದೇ ವರ್ಷ ಯುಎಸ್ ಓಪನ್ ಪ್ರಶಸ್ತಿ ಗೆದ್ದು ಬೀಗಿದ್ದರು. ಬಳಿಕ 2010ರ ಯುಎಸ್ ಓಪನ್ ಮತ್ತು 2011ರ ಆಸ್ಟ್ರೇಲಿಯನ್ ಓಪನ್ ಕೂಡ ಜಯಿಸಿದ್ದರು. 2012ರಲ್ಲಿ ಮತ್ತೊಮ್ಮೆ ನಿವೃತ್ತಿ ಹೊಂದಿದ್ದ ಕ್ಲೈಸ್ಟರ್ಸ್‌, 2013ರಲ್ಲಿ ಪುತ್ರ ಜಾಕ್ ಮತ್ತು 2016ರಲ್ಲಿ 2ನೇ ಪುತ್ರ ಬ್ಲೇಕ್‌ಗೆ ಜನ್ಮ ನೀಡಿದ್ದರು.

‘ನನಗೆ 3ನೇ ಮಗು ಬ್ಲೇಕ್ ಜನಿಸಿದ ಬಳಿಕ ನಾನು ವಿವಿಧ ಟೂರ್ನಿಗಳಿಗಾಗಿ ಪ್ರಯಾಣಿಸಲು ಆರಂಭಿಸಿದೆ ಮತ್ತು ವೀಕ್ಷಕವಿವರಣೆಗಳನ್ನು ನೀಡಲಾರಂಭಿಸಿದೆ. ಆದರೆ ಆಗಲೂ ನನಗೆ, ನಾನೋರ್ವ ಆಟಗಾರ್ತಿ ಎಂಬ ಭಾವನೆಯೇ ಬರುತ್ತಿತ್ತು. ಸಣ್ಣ ತುಡಿತವೊಂದು ಕಾಡುತ್ತಿತ್ತು’ ಎಂದು ಕ್ಲೈಸ್ಟರ್ಸ್‌ ಮತ್ತೊಮ್ಮೆ ಕಣಕ್ಕೆ ಮರಳುವ ಉತ್ಸಾಹಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.

ಈ ವರ್ಷ ಕರೊನಾ ಹಾವಳಿ ಶುರುವಾಗುವುದಕ್ಕೆ ಮುನ್ನ ಕ್ಲೈಸ್ಟರ್ಸ್‌ ಟೆನಿಸ್ ಅಂಗಣಕ್ಕೆ ಮರಳುವ ಸಣ್ಣ ಪ್ರಯತ್ನವೊಂದನ್ನೂ ನಡೆಸಿದ್ದಾರೆ. ಫೆಬ್ರವರಿಯಲ್ಲಿ ದುಬೈ ಮತ್ತು ಮಾಂಟೆರ‌್ರೆಯಲ್ಲಿ 2 ಟೂರ್ನಿಗಳಲ್ಲಿ ಆಡಿದ್ದ ಕ್ಲೈಸ್ಟರ್ಸ್‌, ಮೊದಲ ಸುತ್ತಿನಲ್ಲಿಯೇ ಕ್ರಮವಾಗಿ ಗಾರ್ಬಿನ್ ಮುಗುರುಜಾ ಮತ್ತು ಜೊಹಾನ್ನಾ ಕೊಂಟಾ ವಿರುದ್ಧ ಸೋತಿದ್ದರು. ಮಾರ್ಚ್‌ನಲ್ಲಿ ಮತ್ತಷ್ಟು ಟೂರ್ನಿ ಆಡುವ ಮೂಲಕ ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದ ಅವರಿಗೆ, ಕರೊನಾದಿಂದಾಗಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿದ್ದು ಹಿನ್ನಡೆಯಾಗಿ ಪರಿಣಮಿಸಿತ್ತು.

ಲಾಕ್​ಡೌನ್​ನಲ್ಲೂ ಫಿಟ್ನೆಸ್​, ಅಭ್ಯಾಸದತ್ತ ಗಮನ

ಮುಂದಿನ ಯುಎಸ್ ಓಪನ್‌ನಲ್ಲಿ ಆಡುವ ಹಂಬಲ ಹೊಂದಿರುವ ಕ್ಲೈಸ್ಟರ್ಸ್‌, ಲಾಕ್‌ಡೌನ್ ನಡುವೆಯೂ ಫಿಟ್ನೆಸ್‌ನತ್ತ ಗಮನ ಹರಿಸಿದ್ದಾರೆ. ಕುಟುಂಬದೊಂದಿಗೆ ನ್ಯೂಜೆರ್ಸಿಯ ಮನೆಯಲ್ಲಿದ್ದ ಸಮಯದಲ್ಲಿ ಪತಿ ಜತೆ ಕಿಚನ್ ಚೇರ್‌ಗಳನ್ನೇ ಕೋರ್ಟ್ ಆಗಿ ಪರಿವರ್ತಿಸಿ ಅಭ್ಯಾಸ ನಡೆಸಿದ್ದರು. ಇದೀಗ ತವರೂರು ಬೆಲ್ಜಿಯಂಗೆ ಮರಳಿರುವ ಕ್ಲೈಸ್ಟರ್ಸ್‌, ಅಲ್ಲೂ ಮೊದಲ ಕೆಲ ವಾರಗಳನ್ನು ಕ್ವಾರಂಟೈನ್‌ನಲ್ಲಿ ಕಳೆದಿದ್ದಾರೆ. ಇದೀಗ ಮತ್ತೆ ಫಿಟ್ನೆಸ್, ಅಭ್ಯಾಸದತ್ತ ಗಮನಹರಿಸಿರುವ ಅವರು, ಆಗಸ್ಟ್ 24ರಿಂದ ನಡೆಯಬೇಕಿರುವ ಯುಎಸ್ ಓಪನ್ ನಿಗದಿಯಂತೆಯೇ ನಡೆದರೆ ಅದರಲ್ಲಿ ಪಾಲ್ಗೊಳ್ಳಲು ಸಿದ್ಧವಾಗಿರಬೇಕೆಂಬ ಪ್ರಯತ್ನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net