ಚಿನ್ನದ ಹುಡುಗ ನೀರಜ್​ ಚೋಪ್ರಾ ಕೈಜಾರಿದ ಡೈಮಂಡ್​ ಟ್ರೋಫಿ

neeraj web
Published on

ಯುಜೀನ್​ (ಅಮೆರಿಕ): ಒಲಿಂಪಿಕ್ಸ್​ ಮತ್ತು ವಿಶ್ವ ಚಾಂಪಿಯನ್​ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಪ್ರತಿಷ್ಠಿತ ಡೈಮಂಡ್​ ಲೀಗ್​ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಲರಾಗಿದ್ದಾರೆ. ಡೈಮಂಡ್​ ಲೀಗ್​ ಫೈನಲ್​ನಲ್ಲಿ 83.80 ಮೀಟರ್​ ದೂರ ಜಾವೆಲಿನ್​ ಎಸೆಯಲಷ್ಟೇ ಶಕ್ತರಾದ ನೀರಜ್​ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಕ್ಸ್​ನಲ್ಲಿ ರಜತ ಮತ್ತು ಕಳೆದ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದ ಜೆಕ್​ ಗಣರಾಜ್ಯದ ಜಾಕುಬ್​ ವಡ್ಲೆಜ್​ 84.24 ಮೀ. ಎಸೆತದೊಂದಿಗೆ 3ನೇ ಬಾರಿಗೆ ಡೈಮಂಡ್​ ಲೀಗ್​ ಟ್ರೋಫಿ ಗೆದ್ದು ಬೀಗಿದರು.

25 ವರ್ಷದ ನೀರಜ್​ ಶನಿವಾರ ನಡೆದ ಸ್ಪರ್ಧೆಯಲ್ಲಿ ಮೊದಲ ಮತ್ತು 4ನೇ ಪ್ರಯತ್ನದಲ್ಲಿ ಫೌಲ್​ ಮಾಡಿದರೆ, 2ನೇ ಎಸೆತದಲ್ಲಿ ಗರಿಷ್ಠ 83.80 ಮೀ. ಎಸೆದರು. ನಂತರದಲ್ಲಿ 3ನೇ ಯತ್ನದಲ್ಲಿ 81.37 ಮೀ, 5ನೇ ಯತ್ನದಲ್ಲಿ 80.74 ಮೀ. ಮತ್ತು 6ನೇ ಯತ್ನದಲ್ಲಿ 80.90 ಮೀ. ದೂರ ಭರ್ಜಿ ಎಸೆಯಲಷ್ಟೇ ಶಕ್ತರಾದರು. ಕಳೆದ ತಿಂಗಳು ವಿಶ್ವ ಚಾಂಪಿಯನ್​ಷಿಪ್​ನಲ್ಲಿ 88.17 ಮೀ. ಎಸೆದು ಚಿನ್ನದ ಪದಕ ಗೆದ್ದಿದ್ದ ನೀರಜ್​, ಈ ಬಾರಿ ಅದಕ್ಕಿಂತ 4 ಮೀಟರ್​ಗೂ ಕಡಿಮೆ ದೂರ ಈಟಿ ಎಸೆದರು. ಡೈಮಂಡ್​ ಲೀಗ್​ನ 13 ಚರಣಗಳ ಸ್ಪರ್ಧೆ ಬಳಿಕ ಅಗ್ರ 6 ಜಾವೆಲಿನ್​ ಎಸೆತಗಾರರಷ್ಟೇ ಫೈನಲ್ಸ್​ನಲ್ಲಿ ಸ್ಪರ್ಧಿಸುತ್ತಾರೆ ಮತ್ತು ವಿಜೇತರಿಗೆ ಡೈಮಂಡ್​ ಟ್ರೋಫಿ ಮತ್ತು 24.80 ಲಕ್ಷ ರೂ. ಬಹುಮಾನ ಲಭಿಸುತ್ತದೆ. ನೀರಜ್​ 9.97 ಲಕ್ಷ ರೂ. ಬಹುಮಾನಕ್ಕೆ ತೃಪ್ತಿಪಟ್ಟರು.

ಹಾಲಿ ಋತುವಿನಲ್ಲಿ ಭಾಗವಹಿಸಿದ ಕ್ರೀಡಾಕೂಟಗಳಲ್ಲಿ ನೀರಜ್​ ಮೊದಲ ಬಾರಿಗೆ 85 ಮೀ.ಗಿಂತ ದೂರ ಭರ್ಜಿ ಎಸೆಯಲು ವಿಫಲರಾದರು. ಕಳೆದ ವರ್ಷದ ಡೈಮಂಡ್​ ಲೀಗ್​ ಫೈನಲ್​ನಲ್ಲಿ ಅವರು 88.4 ಮೀ. ಎಸೆತದೊಂದಿಗೆ ಮೊದಲ ಬಾರಿಗೆ ವಜ್ರದ ಟ್ರೋಫಿ ಗೆದ್ದುಕೊಂಡಿದ್ದರು. ನೀರಜ್​ 89.94 ಮೀ. ಎಸೆತದ ವೈಯಕ್ತಿಕ ಶ್ರೇಷ್ಠ ದಾಖಲೆ ಹೊಂದಿದ್ದಾರೆ.

ಡೈಮಂಡ್​ ಲೀಗ್ ಫೈನಲ್​ ಸ್ಪರ್ಧೆ ನಡೆದ ತಾಣದಲ್ಲಿ 25 ಡಿಗ್ರಿ ಸೆಲ್ಸಿಯಸ್​ ತಾಪಮಾನವಿತ್ತು. ಹೀಗಾಗಿ ಯಾವ ಸ್ಪರ್ಧಿಗೂ 85 ಮೀ.ಗಿಂತ ದೂರ ಜಾವೆಲಿನ್​ ಎಸೆಯಲಾಗಲಿಲ್ಲ. ಮೊದಲ ಯತ್ನದಲ್ಲೇ 84.01 ಮೀ. ಎಸೆದು ಆರಂಭದಿಂದಲೇ ಅಗ್ರಸ್ಥಾನದಲ್ಲಿದ್ದ ವಡ್ಲೆಜ್​, ಈ ಮುನ್ನ 2017 ಮತ್ತು 2018ರಲ್ಲೂ ಡೈಮಂಡ್​ ಲೀಗ್​ ಟ್ರೋಫಿ ಗೆದ್ದಿದ್ದರು. ಫಿನ್​ಲ್ಯಾಂಡ್​ನ ಒಲಿವರ್​ ಹೆಲಾಂಡರ್​ (83.74) 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2 ಬಾರಿಯ ವಿಶ್ವ ಚಾಂಪಿಯನ್​ ಆಂಡರ್​ಸನ್​ ಪೀಟರ್ಸ್​ (74.71 ಮೀ) ಅವರ ಹಾಲಿ ಋತುವಿನ ಕಳಪೆ ನಿರ್ವಹಣೆ ಮುಂದುವರಿದಿದ್ದು, 6ನೇ ಹಾಗೂ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಇನ್ನು ಏಷ್ಯಾಡ್​ನತ್ತ

ನೀರಜ್​ ಚೋಪ್ರಾ ಇನ್ನು ಹಾಂಗ್​ರೆೌ ಏಷ್ಯನ್​ ಗೇಮ್ಸ್​ನತ್ತ ಗಮನಹರಿಸಲಿದ್ದಾರೆ. 2018ರ ಜಕಾರ್ತ ಏಷ್ಯಾಡ್​ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ನೀರಜ್​, ಈ ಬಾರಿ ಅದನ್ನು ಉಳಿಸಿಕೊಳ್ಳುವತ್ತ ಹಂಬಲದಲ್ಲಿದ್ದು, ಪಾಕಿಸ್ತಾನದ ಜಾವೆಲಿನ್​ ಥ್ರೋ ತಾರೆ ಅರ್ಷದ್​ ನದೀಂ ಪ್ರಮುಖ ಸವಾಲಾಗಲಿದ್ದಾರೆ. ಇದು ನೀರಜ್​ಗೆ ವರ್ಷದ ಕೊನೇ ಸ್ಪರ್ಧೆಯೂ ಆಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net