

ನವದೆಹಲಿ: ಐಪಿಎಲ್ ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಳ್ಳುವುದುದು ಪಕ್ಕಾ ಆಗಿರುವ ಬೆನ್ನಲ್ಲೇ ವಿಶ್ವದ ಶ್ರೀಮಂತ ಟಿ20 ಲೀಗ್ ಶತ್ರುರಾಷ್ಟ್ರ ಚೀನಾ ಜತೆಗಿನ ಸಂಬಂಧವನ್ನೂ ಗಟ್ಟಿ ಮಾಡಿಕೊಂಡಿರುವ ಮಾಹಿತಿಯೂ ಹೊರಬಿದ್ದಿದೆ. ಐಪಿಎಲ್ ಟೂರ್ನಿಯ ಶೀರ್ಷಿಕೆ ಪ್ರಾಯೋಜಕನಾಗಿ ಚೀನಾ ಮೂಲದ ವಿವೋ ಮೊಬೈಲ್ ಕಂಪನಿ ಜತೆಗಿನ ಒಪ್ಪಂದವನ್ನು ಮುಂದುವರಿಸಲು ಭಾನುವಾರ ನಡೆದ ಐಪಿಎಲ್ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಈಗಿರುವ ಎಲ್ಲ ಪ್ರಾಯೋಜಕರ ಜತೆಗಿನ ಒಪ್ಪಂದವನ್ನೂ ಮುಂದುವರಿಸಲು ನಿರ್ಣಯ ಕೈಗೊಳ್ಳಲಾಗಿದೆ. ಈ ಮುನ್ನ ಗಡಿ ವಿವಾದದ ಬಳಿಕ ಚೀನಾ ಕಂಪನಿಗಳ ಪ್ರಾಯೋಜಕತ್ವವನ್ನು ಕೈಬಿಡುವ ಬಗ್ಗೆ ಯೋಚಿಸುವುದಾಗಿ ಬಿಸಿಸಿಐ ತಿಳಿಸಿತ್ತು. ವಿವೋ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐಗೆ ವಾರ್ಷಿಕ 440 ಕೋಟಿ ರೂ. ಪಾವತಿಸುತ್ತದೆ.
ಇದನ್ನೂ ಓದಿ: ನವೆಂಬರ್ 1ರಿಂದ 10ರವರೆಗೆ ಮಹಿಳೆಯರ ಐಪಿಎಲ್
ಈ ಸಮಯದಲ್ಲಿ ಹೊಸ ಪ್ರಾಯೋಜಕರನ್ನು ಕಂಡುಕೊಳ್ಳುವುದು ಕಷ್ಟಕರವಾದುದು. ಹಾಲಿ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿ ಮತ್ತು ಕಡಿಮೆ ಸಮಯಾವಾಕಾಶದ ಹಿನ್ನೆಲೆಯಲ್ಲಿ ಹಾಲಿ ಪ್ರಾಯೋಜಕರನ್ನೇ ಮುಂದುವರಿಸಲಾಗುತ್ತಿದೆ ಎಂದು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರು ವಿವರಿಸಿದ್ದಾರೆ.