ದಾಖಲೆಗಳ ಸರದಾರ ಆರ್​. ಅಶ್ವಿನ್​; ಇಲ್ಲಿದೆ ಪ್ರಮುಖ ದಾಖಲೆಗಳ ವಿವರ...

web ash record
Published on

ಬ್ರಿಸ್ಬೇನ್: ಆರ್​. ಅಶ್ವಿನ್​ ಭಾರತ ಪರ ಅಂತಾರಾಷ್ಟ್ರೀಯ ಮತ್ತು ಟೆಸ್ಟ್​ ಕ್ರಿಕೆಟ್​ನಲ್ಲಿ ಕನ್ನಡಿಗ ಅನಿಲ್​ ಕುಂಬ್ಳೆ ಬಳಿಕ 2ನೇ ಗರಿಷ್ಠ ವಿಕೆಟ್​ ಸಾಧಕ ಎನಿಸಿದ್ದಾರೆ. 106 ಟೆಸ್ಟ್​ಗಳಲ್ಲಿ 537 ವಿಕೆಟ್​ ಕಬಳಿಸಿರುವ ಅವರು, ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 765 ವಿಕೆಟ್​ ಸಂಪಾದಿಸಿದ್ದಾರೆ. ಜತೆಗೆ 2011ರ ಏಕದಿನ ವಿಶ್ವಕಪ್​ ಮತ್ತು 2013ರ ಚಾಂಪಿಯನ್ಸ್​ ಟ್ರೋಫಿ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದಾರೆ.

ಮುತ್ತಯ್ಯ ಮುರಳೀಧರನ್​ (67) ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ 2ನೇ ಗರಿಷ್ಠ 5 ವಿಕೆಟ್​ ಗೊಂಚಲು ಪಡೆದ ಶೇನ್​ ವಾರ್ನ್​ (37) ದಾಖಲೆ ಸರಿಗಟ್ಟಿರುವ ಅಶ್ವಿನ್​, 11 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದ ದಾಖಲೆಯನ್ನು ಮುರಳೀಧರನ್​ ಜತೆಗೆ ಹಂಚಿಕೊಂಡಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 250, 300, 350 ವಿಕೆಟ್​ಗಳನ್ನು ಅತಿವೇಗವಾಗಿ ಪಡೆದ ಸಾಧಕರಾಗಿದ್ದಾರೆ. ಭಾರತ ಪರ 50ರಿಂದ 500 ವಿಕೆಟ್​ಗಳನ್ನು ಅತಿವೇಗವಾಗಿ ಪಡೆದ ಬೌಲರ್​ ಆಗಿದ್ದಾರೆ. ಒಂದೇ ಟೆಸ್ಟ್​ನಲ್ಲಿ ಶತಕ, 5 ವಿಕೆಟ್​ ಗೊಂಚಲು ಪಡೆದ ಸಾಧನೆಯನ್ನು 4 ಬಾರಿ ಸಾಧಿಸಿರುವ ಏಕೈಕ ಭಾರತೀಯರಾಗಿದ್ದಾರೆ.

3 ಸಾವಿರ ರನ್​ ಮತ್ತು 500 ವಿಕೆಟ್​ ಪಡೆದ ವಿಶ್ವದ ಕೇವಲ 3 ಆಲ್ರೌಂಡರ್​ಗಳಲ್ಲಿ ಒಬ್ಬರಾಗಿದ್ದಾರೆ. ಭಾರತದಲ್ಲಿ ಗರಿಷ್ಠ (383) ವಿಕೆಟ್​ ಪಡೆದ ಬೌಲರ್​ ಆಗಿದ್ದಾರೆ. ಎಡಗೈ ಬ್ಯಾಟರ್​ಗಳನ್ನು ಗರಿಷ್ಠ ಬಾರಿ ಔಟ್​ (268) ಔಟ್​ ಮಾಡಿದ ಬೌಲರ್​ ಆಗಿದಾರೆ. ಬೆನ್​ ಸ್ಟೋಕ್ಸ್​ (13), ಡೇವಿಡ್​ ವಾರ್ನರ್​ (11) ಅಶ್ವಿನ್​ಗೆ ಗರಿಷ್ಠ ಬಾರಿ ವಿಕೆಟ್​ ಒಪ್ಪಿಸಿದ ಬ್ಯಾಟರ್​ಗಳಾಗಿದ್ದಾರೆ. 25 ಬಾರಿ ಸರಣಿಯೊಂದರಲ್ಲಿ 25ಕ್ಕಿಂತ ಅಧಿಕ ವಿಕೆಟ್​ ಕಬಳಿಸಿರುವ ಏಕೈಕ ಬೌಲರ್​ ಆಗಿದ್ದಾರೆ. ಅಶ್ವಿನ್​ ತವರೂರು ಚೆನ್ನೈನ ಚೆಪಾಕ್​ ಸ್ಟೇಡಿಯಂನಲ್ಲೇ (36) ಸರ್ವಾಧಿಕ ವಿಕೆಟ್​ ಕಬಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net