ಎಲ್​ಆರ್​ ಚೇತನ್​ ಬಿರುಸಿನಾಟ; ಬೆಂಗಳೂರು ಬ್ಲಾಸ್ಟರ್ಸ್​ಗೆ ಭರ್ಜರಿ ಜಯ

web maha bng
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆರಂಭಿಕ ಎಲ್​ಆರ್​ ಚೇತನ್​ (88 ರನ್​, 53 ಎಸೆತ, 9 ಬೌಂಡರಿ, 5 ಸಿಕ್ಸರ್​) ದಿಟ್ಟ ಬ್ಯಾಟಿಂಗ್​ ನಿರ್ವಹಣೆಯ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್​ ತಂಡ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್​ ವಿರುದ್ಧ 56 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಕಂಡ 5ನೇ ಗೆಲುವಿನೊಂದಿಗೆ ಬೆಂಗಳೂರು ಅಗ್ರಸ್ಥಾನಕ್ಕೆ ಮರಳಿದ್ದು, ಸೆಮೀಸ್​ ಪ್ರವೇಶವನ್ನೂ ಬಹುತೇಕ ಖಚಿತಪಡಿಸಿಕೊಂಡಿದೆ.

ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬೆಂಗಳೂರು ತಂಡ 7 ವಿಕೆಟ್​ಗೆ 189 ರನ್​ ಪೇರಿಸಿತು. ಪ್ರತಿಯಾಗಿ ಹಂಗಾಮಿ ನಾಯಕ ಶುಭಾಂಗ್​ ಹೆಗ್ಡೆ (28ಕ್ಕೆ 3) ಮತ್ತು ಕ್ರಾಂತಿ ಕುಮಾರ್​ (18ಕ್ಕೆ 3) ದಾಳಿಗೆ ಕುಸಿದ ಹಾಲಿ ರನ್ನರ್​ಅಪ್​ ಮೈಸೂರು ತಂಡ 17.5 ಓವರ್​ಗಳಲ್ಲಿ 133 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು. ಕರುಣ್​ ನಾಯರ್​ ಬಳಗಕ್ಕೆ ಇದು ಸತತ 2ನೇ ಸೋಲಾಗಿದೆ.

ಚೇತನ್​ ಬಿರುಸಿನಾಟ

ಕಳೆದ ಹರಾಜಿನಲ್ಲಿ ಸರ್ವಾಧಿಕ 8.60 ಲಕ್ಷ ರೂ.ಗೆ ಬೆಂಗಳೂರು ತಂಡ ಸೇರಿದ್ದ ಯುವ ಆರಂಭಿಕ ಎಲ್​ಆರ್​ ಚೇತನ್​ ಏಕಾಂಗಿ ಹೋರಾಟದ ಮೂಲಕ ಮೊತ್ತ ಏರಿಸಿದರು. ನಾಯಕ ಮಯಾಂಕ್​ ಅಗರ್ವಾಲ್​ ಪಂದ್ಯದಿಂದ ವಿಶ್ರಾಂತಿ ಪಡೆದ ನಡುವೆ ಚೇತನ್​, 3ನೇ ವಿಕೆಟ್​ಗೆ ರತ್​ (29) ಜತೆ 72 ರನ್​ ಸೇರಿಸಿದರು. ನಂತರ ಸೂರಜ್​ ಅಹುಜಾ (32) ಜತೆ ಮತ್ತೆ 61 ರನ್​ ಕೂಡಿಸಿದರು.

ಬೆಂಗಳೂರು ಬ್ಲಾಸ್ಟರ್ಸ್​: 7 ವಿಕೆಟ್​ಗೆ 189 (ಎಲ್​ಆರ್​ ಚೇತನ್​ 88, ರತ್​ 29, ಅಹುಜಾ 32, ಅನಿರುದ್ಧ 4, ಸಿಎ ಕಾರ್ತಿಕ್​ 33ಕ್ಕೆ 3, ಕೆ. ಗೌತಮ್​ 27ಕ್ಕೆ 2, ವಿದ್ಯಾಧರ್​ 25ಕ್ಕೆ 1, ಸುಚಿತ್​ 28ಕ್ಕೆ 1), ಮೈಸೂರು ವಾರಿಯರ್ಸ್​: 17.5 ಓವರ್​ಗಳಲ್ಲಿ 133 (ಎಸ್​ಯು ಕಾರ್ತಿಕ್​ 26, ಕರುಣ್​ 13, ಸಮಿತ್​ ದ್ರಾವಿಡ್​ 5, ಧರ್ಮಾನಿ 20, ಸುಚಿತ್​ 16, ಸುಮಿತ್​ 18*, ಶುಭಾಂಗ್​ 28ಕ್ಕೆ 3, ಕ್ರಾಂತಿ ಕುಮಾರ್​ 18ಕ್ಕೆ 3, ಲವಿಶ್​ 10ಕ್ಕೆ 2, ಅನಿರುದ್ಧ 10ಕ್ಕೆ 2). ಪಂದ್ಯಶ್ರೇಷ್ಠ: ಎಲ್​ಆರ್​ ಚೇತನ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net