

ಲಂಡನ್: ಭಾರತದ ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ (129 ರನ್, 302 ಎಸೆತ, 15 ಬೌಂಡರಿ) ಕೌಂಟಿ ಕ್ರಿಕೆಟ್ ಚಾಂಪಿಯನ್ಷಿಪ್ನ ಎರಡನೇ ಡಿವಿಷನ್ನಲ್ಲಿ ಮಿಡಲ್ಸೆಕ್ಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಸಸೆಕ್ಸ್ ಪರ ತಾಳ್ಮೆಯ ಶತಕ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರ 65ನೇ ಶತಕವೆನಿಸಿದೆ.
ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನ 91 ರನ್ ಗಳಿಸಿ ಅಜೇಯರಾಗಿದ್ದ ಪೂಜಾರ, 2ನೇ ದಿನವಾದ ಶನಿವಾರ ಶತಕ ಪೂರೈಸಿದರು. ಅವರಿಗೆ ನಾಯಕ ಜಾನ್ ಸಿಂಪ್ಸನ್ (167) ಉತ್ತಮ ಸಾಥ್ ನೀಡಿದರು. ಈ ಮೂಲಕ ಸಸೆಕ್ಸ್ ತಂಡ 7 ವಿಕೆಟ್ಗೆ 500 ಪ್ಲಸ್ ಮೊತ್ತ ಪೇರಿಸಿ ಆಟ ಮುಂದುವರಿಸಿದೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಭಾರತ ಪರ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ ಪೂಜಾರ ಸದ್ಯ 3ನೇ ಸ್ಥಾನದಲ್ಲಿದ್ದಾರೆ. ಸಚಿನ್ ತೆಂಡುಲ್ಕರ್&ಸುನೀಲ್ ಗಾವಸ್ಕರ್ (81) ಜಂಟಿ ಅಗ್ರಸ್ಥಾನದಲ್ಲಿದ್ದರೆ, ರಾಹುಲ್ ದ್ರಾವಿಡ್ (68) 2ನೇ ಸ್ಥಾನದಲ್ಲಿದ್ದಾರೆ. 35 ವರ್ಷದ ಪೂಜಾರ 2023ರ ಜೂನ್ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ಭಾರತ ಪರ ಕೊನೆಯದಾಗಿ ಆಡಿದ್ದಾರೆ.