ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 63ನೇ ಶತಕ ಸಿಡಿಸಿ ಮತ್ತೆ ಟೀಮ್​ ಇಂಡಿಯಾದ ಕದ ತಟ್ಟಿದ ಚೇತೇಶ್ವರ ಪೂಜಾರ!

pujara web
Published on

ರಾಜ್​ಕೋಟ್​: ಸದ್ಯ ಭರ್ಜರಿ ಫಾರ್ಮ್​ನಲ್ಲಿರುವ ನಡುವೆಯೂ ಭಾರತ ಟೆಸ್ಟ್​ ತಂಡಕ್ಕೆ ಪುನರಾಗಮನ ಕಾಣದಿರುವ ಅನುಭವಿ ಬ್ಯಾಟರ್​ ಚೇತೇಶ್ವರ ಪೂಜಾರ, ಭಾರತ-ಇಂಗ್ಲೆಂಡ್​ 3ನೇ ಟೆಸ್ಟ್​ ನಡೆಯುತ್ತಿರುವ ನಿರಂಜನ್​ ಷಾ ಸ್ಟೇಡಿಯಂನಿಂದ ಕೇವಲ 32 ಕಿಲೋಮೀಟರ್​ ದೂರದಲ್ಲಿರುವ ಸನೋಸರ ಕ್ರಿಕೆಟ್​ ಗ್ರೌಂಡ್​ನಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಆಯ್ಕೆಗಾರರಿಗೆ ದಿಟ್ಟ ಉತ್ತರ ನೀಡಿದ್ದಾರೆ. ತನ್ನನ್ನು ಮತ್ತೆ ಆಯ್ಕೆಗೆ ಪರಿಗಣಿಸುವಂತೆಯೂ ಅವರು ಈ ಮೂಲಕ ಸಂದೇಶ ರವಾನಿಸಿದ್ದಾರೆ.

36 ವರ್ಷದ ಪೂಜಾರ ಮಣಿಪುರ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 105 ಎಸೆತಗಳಲ್ಲೇ 12 ಬೌಂಡರಿ ಮತ್ತು 1 ಸಿಕ್ಸರ್​ ಒಳಗೊಂಡ 108 ರನ್​ ಸಿಡಿಸಿದರು. ಇದು ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅವರ 63ನೇ ಮತ್ತು ಹಾಲಿ ರಣಜಿ ಟ್ರೋಫಿಯಲ್ಲಿ 3ನೇ ಶತಕವಾಗಿದೆ.

ಇದು ರಣಜಿಯಲ್ಲಿ ಅವರ ಒಟ್ಟಾರೆ 24ನೇ ಶತಕವಾಗಿದೆ. ಅವರು 103 ಟೆಸ್ಟ್​ಗಳಲ್ಲಿ 19 ಶತಕ ಸಿಡಿಸಿದ್ದಾರೆ. ಸಚಿನ್​ ತೆಂಡುಲ್ಕರ್​, ಸುನೀಲ್​ ಗಾವಸ್ಕರ್​ (ತಲಾ 81) ಮತ್ತು ರಾಹುಲ್​ ದ್ರಾವಿಡ್​ (68) ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಪೂಜಾರಗಿಂತ ಅಧಿಕ ಶತಕ ಸಿಡಿಸಿರುವ ಭಾರತೀಯರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net