

ಜೈಪುರ: ಅನುಭವಿ ಬ್ಯಾಟರ್ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 62ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 36 ವರ್ಷದ ಪೂಜಾರ ಮೊದಲ ದಿನ 110 ರನ್ ಬಾರಿಸಿದರು. ಇದು ರಣಜಿ ಟ್ರೋಫಿಯಲ್ಲಿ ಅವರ 23ನೇ ಶತಕವಾಗಿದೆ.
ಪೂಜಾ ಅವರು 103 ಟೆಸ್ಟ್ಗಳಲ್ಲಿ 19ಶತಕ ಸಿಡಿಸಿದ್ದಾರೆ. ಸಚಿನ್ ತೆಂಡುಲ್ಕರ್, ಸುನೀಲ್ ಗಾವಸ್ಕರ್ (ತಲಾ 81) ಮತ್ತು ರಾಹುಲ್ ದ್ರಾವಿಡ್ (68) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಪೂಜಾರಗಿಂತ ಅಧಿಕ ಶತಕ ಸಿಡಿಸಿರುವ ಭಾರತೀಯರಾಗಿದ್ದಾರೆ. 2023ರ ಜೂನ್ನಲ್ಲಿ ಪೂಜಾರ ಭಾರತ ತಂಡದ ಪರ ಕೊನೆಯದಾಗಿ ಆಡಿದ್ದು, ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿ ಪುನರಾಗಮನ ನಿರೀಕ್ಷಿಸುತ್ತಿದ್ದಾರೆ.
ಪೃಥ್ವಿ ಷಾ ಬಿರುಸಿನ ಶತಕ
ಮುಂಬೈ ಆರಂಭಿಕ ಪೃಥ್ವಿ ಷಾ (159 ರನ್, 185 ಎಸೆತ, 18 ಬೌಂಡರಿ, 3 ಸಿಕ್ಸರ್) ಛತ್ತೀಸ್ಗಢ ವಿರುದ್ಧದ ರಣಜಿ ಪಂದ್ಯದಲ್ಲಿ ಬಿರುಸಿನ ಶತಕ ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ. ಗಾಯದಿಂದ ಚೇತರಿಸಿಕೊಂಡು 6 ತಿಂಗಳ ಬಳಿಕ ಇತ್ತೀಚೆಗಷ್ಟೇ ಮರಳಿ ಕಣಕ್ಕಿಳಿದಿರುವ ಪೃಥ್ವಿ ಷಾ, 102 ಎಸೆತಗಳಲ್ಲೇ ಶತಕ ಪೂರೈಸಿದರು. ಮುಂಬೈ ನಾಯಕ ಹಾಗೂ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ (1) ರನ್ಬರ ಮುಂದುವರಿದಿದೆ.