

ಮುಂಬೈ: ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಇಂದು ಹಲವು ಸೆಲೆಬ್ರಿಟಿಗಳು ತಮ್ಮದೇ ಶೈಲಿಯಲ್ಲಿ ಈ ದಿನವನ್ನು ಆಚರಿಸಿದ್ದಾರೆ, ಶುಭಾಶಯ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕೆಲವು ವಿಶಿಷ್ಟ ಸಂದೇಶ ಮತ್ತು ಚಿತ್ರಗಳು ಇಲ್ಲಿವೆ.
ಕಾರ್ಗಿಲ್ ಯುದ್ಧದಲ್ಲಿ ಅಮರನಾದ ವೀರ ಸೇನಾನಿ ಕ್ಯಾಪ್ಟನ್ ವಿಕ್ರಮ್ ಬತ್ರ ಅವರ ಮೇಲೆ ಚಿತ್ರಿತವಾದ 'ಶೇರ್ಷಾ' ಹಿಂದಿ ಚಿತ್ರದ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರ, ಆ ಚಿತ್ರದ್ದೇ ಒಂದು ಡೈಲಾಗ್ ಹಾಕಿ ಶುಭಾಶಯ ಕೋರಿದ್ದಾರೆ. ಇಂಡಿಯಾ ಗೇಟ್ನ ಮುಂದೆ ರಾಷ್ಟ್ರಧ್ವಜವನ್ನು ಹಿಡಿದಿರುವ ತಮ್ಮ ಚಿತ್ರವೊಂದನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ನಟಿ ಜಾಕ್ಲೀನ್ ಫರ್ನಾಂಡಿಸ್, ಭಾರತೀಯ ಪಾರಂಪರಿಕ ಉಡುಗೆಯನ್ನು ತೊಟ್ಟು ಪೋಸ್ ನೀಡಿದ್ದಾರೆ. ಬಿಳಿಯ ಬಣ್ಣದ ಸೀರೆಗೆ ಹಸಿರು ಬಣ್ಣದ ಒಡವೆಗಳನ್ನು ತೊಟ್ಟಿರುವ ಸುಂದರ ಚಿತ್ರಗಳನ್ನು ರಾಷ್ಟ್ರಧ್ವಜದ ಎಮೋಜಿಗಳೊಂದಿಗೆ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ ಅಜಯ್ ದೇವಗನ್ ಹಿನ್ನೆಲೆಯಲ್ಲಿ ಬಾವುಟವುಳ್ಳ ತಮ್ಮ ಚಿತ್ರವನ್ನು ಶೇರ್ ಮಾಡಿ ಶುಭಾಶಯ ಕೋರಿದ್ದಾರೆ. "ಭಾರತೀಯ ಧ್ವಜವನ್ನು ನೋಡಿದರೆ ಒಂದು ಭಾವನೆ ಪ್ರಬಲವಾಗುತ್ತದೆ - ಅದು ಕೃತಜ್ಞತೆ. ಬಾವುಟವನ್ನು ಎತ್ತರಕ್ಕೆ ಹಾರುತ್ತಿರುವಂತೆ ನೋಡಿಕೊಳ್ಳುತ್ತಿರುವ ನಮ್ಮ ರಕ್ಷಣಾ ಪಡೆಗಳಿಗೆ ಕೃತಜ್ಞತೆ" ಎಂದಿದ್ದಾರೆ.
ಅಜಯ್ ಪತ್ನಿ, ನಟಿ ಕಾಜೋಲ್ ಧ್ವಜದ ಮೂರೂ ಬಣ್ಣಗಳ ವಸ್ತ್ರಗಳನ್ನು ತೊಟ್ಟಿರುವ ತಮ್ಮ ಚಿತ್ರಗಳೊಂದಿಗೆ ಹಿನ್ನೆಲೆಯಲ್ಲಿ "ಜಯ ಜಯ ಜಯ ಜಯ ಹೇ" ಹಾಡಿದ್ದಾರೆ.
ಗಾಯಕಿ ನೇಹಾ ಕಕ್ಕರ್ ಬಿಳಿಯ ಸಲ್ವಾರ್ ತೊಟ್ಟು, ಬಾವುಟವನ್ನು ಕೈಯಲ್ಲಿ ಹಿಡಿದಿರುವ ತಮ್ಮ ಚಿತ್ರವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಕ್ರಿಕೆಟ್ ಹೀರೋ ಸಚಿನ್ ತೆಂಡೂಲ್ಕರ್ ಅವರು, "ಭಾರತ್ ಹಮೇಶಾ ಸರ್ ಆಂಖೋ ಪರ್" ಎಂದು ಟ್ವೀಟ್ ಮಾಡಿದ್ದಾರೆ. "ನಾನು ಮೈದಾನಕ್ಕೆ ಏಕೆ ಇಳಿದಿದ್ದೇನೆ ಎಂಬುದನ್ನು ನೆನಪಿಟ್ಟುಕೊಳ್ಳಲು ಯಾವಾಗಲೂ ನನ್ನ ಹೆಲ್ಮೆಟ್ ಮೇಲೆ ಬಾವುಟವನ್ನು ಹೆಮ್ಮೆಯಿಂದ ಧರಿಸಿದ್ದೇನೆ. ವಿಶ್ವದೆಲ್ಲೆಡೆಯ ಭಾರತೀಯರಿಗೆ 75ನೇ ಸ್ವಾತಂತ್ರ್ಯದಿನದ ಶುಭಾಶಯಗಳು. ಜೈಹಿಂದ್" ಎಂದು ತಮ್ಮ ಹೆಲ್ಮೆಟ್ ಮೇಲೆ ಬಾವುಟ ಕಾಣುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತ ತಂಡದ ವಿಜಯದ ಕ್ಷಣದ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, "ಸ್ವಾತಂತ್ರ್ಯ ಬೆಲೆಬಾಳುವಂಥದ್ದು. ಅದನ್ನು ಗೌರವಿಸೋಣ, ಜವಾಬ್ದಾರಿಯಿಂದ ಅನುಭವಿಸೋಣ" ಎಂದಿದ್ದಾರೆ.
ವೀರೇಂದ್ರ ಸೆಹವಾಗ್ ಕೂಡ ತ್ರಿವರ್ಣದೊಂದಿಗೆ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, "ನಾವು ಹಿಂದೂಸ್ತಾನಿ ಎಂಬುದೇ ನಮ್ಮ ನಿಜವಾದ ಗುರುತು" ಎಂದು ಕಾವ್ಯಮಯವಾಗಿ ಬರೆದಿದ್ದಾರೆ.