

ನವದೆಹಲಿ : ಸ್ವಾತಂತ್ರ್ಯದಿನದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರವು ಹಲವು ಯೋಜನೆಗಳನ್ನು ಆರಂಭಿಸಿದೆ. ಅವುಗಳಲ್ಲಿ ಗಗನ್ ಯಾನ್ ಮಿಷನ್ ಮಹತ್ವದ್ದಾಗಿದೆ. ಇದರಡಿ ಭಾರತೀಯ ವಾಯುಪಡೆಯ ಕೆಲವು ಪೈಲೆಟ್ಗಳು ವಿದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅವರು ಅಂತರಿಕ್ಷದಲ್ಲಿ ಹಾರಾಟ ನಡೆಸಿದಾಗ ಭಾರತವು ಅಂತರಿಕ್ಷಕ್ಕೆ ಮಾನವರನ್ನು ಕಳುಹಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ಎಂದು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಹೇಳಿದರು.
ಸ್ವಾತಂತ್ರ್ಯೋತ್ಸವದ ಮುನ್ನಾದಿವಸವಾದ ಇಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಕೋವಿಂದ್, 75ನೇ ಸ್ವಾತಂತ್ರ್ಯೋತ್ಸವ ವರ್ಷದ ಸಂದರ್ಭದಲ್ಲೇ ಲೋಕತಂತ್ರದ ಮಂದಿರವಾದ ಸಂಸತ್ ಭವನವು ಹೊಸ ಕಟ್ಟಡಕ್ಕೆ ವರ್ಗಾವಣೆಯಾಗುತ್ತಿರುವುದು ವಿಶೇಷವಾಗಿದೆ ಎಂದು ರಾಜಧಾನಿಯ ಸೆಂಟ್ರಲ್ ವಿಸ್ತಾ ಯೋಜನೆಯ ಬಗ್ಗೆ ಪ್ರಸ್ತಾಪಿಸಿದರು.
ಆತ್ಮನಿರ್ಭರ ಭಾರತದ ಆಶಯದಲ್ಲಿ ಹಲವು ಯೋಜನೆಗಳನ್ನು ಭಾರತ ಸರ್ಕಾರ ಆರಂಭಿಸಿದೆ. ಕರೊನಾ ತಂದೊಡ್ಡಿರುವ ಆರ್ಥಿಕ ಸಂಕಷ್ಟಗಳನ್ನು ಸವಾಲುಗಳನ್ನು ಎದುರಿಸಲು ಸರ್ವಪ್ರಯತ್ನ ಮಾಡುತ್ತಿದೆ ಎಂದರು. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಉತ್ತಮಗೊಳ್ಳುವುದರೊಂದಿಗೆ ಜನರ ಈಸ್ ಆಫ್ ಲಿವಿಂಗ್ ಉತ್ತಮಗೊಳ್ಳುತ್ತದೆ ಎಂದರು.
ಅನ್ನದಾತ ರೈತರಿಗೆ ಶಕ್ತಿ ತುಂಬಲು ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಸರ್ಕಾರ ಹಲವು ಬದಲಾವಣೆ ತರುತ್ತಿದೆ ಎಂದು ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಮಾತನಾಡಿದ ರಾಷ್ಟ್ರಪತಿ ಕೋವಿಂದ್ ಅವರು, ಸ್ವಾತಂತ್ರ್ಯ ಸೇನಾನಿಗಳ ಕನಸಿನಂತೆ ನಾವು ಸಾಧಿಸಬೇಕಾದ ಮೈಲಿಗಲ್ಲುಗಳು ಇನ್ನೂ ಬಹಳಷ್ಟಿವೆ. ಈ ಸಾಧನೆಯನ್ನು ಮಾಡಲು ನಾವೆಲ್ಲಾ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು. (ಏಜೆನ್ಸೀಸ್)