ಡೆಲ್ಲಿ ಕ್ಯಾಪಿಟಲ್ಸ್‌ಗೆ ಈ ದೌರ್ಬಲ್ಯವೇ ಮುಳುವಾಗುತ್ತಿದೆ ಎಂದ ಕೋಚ್​ ಪಾಂಟಿಂಗ್!

ponting web
Published on

ದುಬೈ: ಮೊದಲ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಬೀಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಂತರದ 6 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದೆ. ಈ ಪೈಕಿ 3 ಸೋಲುಗಳು ಕೊನೇ 3 ಪಂದ್ಯದಲ್ಲೇ ಎದುರಾಗಿದ್ದು, ಸತತ 2ನೇ ಪಂದ್ಯದಲ್ಲಿ ಚೇಸಿಂಗ್ ವೇಳೆ ಎಡವಿದೆ. ತಂಡದ ಈ ವೈಫಲ್ಯದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಕಳವಳ ವ್ಯಕ್ತಪಡಿಸಿದ್ದು, ಪ್ಲೇಆಫ್​ ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ತಂಡದ ಕೊನೇ 2 ಲೀಗ್ ಪಂದ್ಯಗಳಲ್ಲಿ ಈ ದೌರ್ಬಲ್ಯವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಮಂಗಳವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡದ 220 ರನ್ ಸವಾಲಿಗೆ ಪ್ರತಿಯಾಗಿ ಡೆಲ್ಲಿ ತಂಡ ಯಾವ ಹಂತದಲ್ಲೂ ಯಶಸ್ವಿ ಚೇಸಿಂಗ್‌ನ ಲಕ್ಷಣ ತೋರಲಿಲ್ಲ. 19 ಓವರ್‌ಗಳಲ್ಲಿ 131 ರನ್‌ಗೆ ಸರ್ವಪತನ ಕಂಡಿತು. ಶಿಖರ್ ಧವನ್ (0), ಸ್ಟೋಯಿನಿಸ್ (5), ಹೆಟ್ಮೆಯರ್ (16) ಮತ್ತು ನಾಯಕ ಶ್ರೇಯಸ್ ಅಯ್ಯರ್ (7) ವೈಫಲ್ಯ ತಂಡವನ್ನು ಕಾಡಿತು. ಅಜಿಂಕ್ಯ ರಹಾನೆ (26) ಮತ್ತು ರಿಷಭ್ ಪಂತ್ (36) ಹೋರಾಟ ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತವಾಯಿತು. ಸ್ಪಿನ್ನರ್ ರಶೀದ್ ಖಾನ್ (7ಕ್ಕೆ 3) ಡೆಲ್ಲಿಗೆ ಕಡಿವಾಣ ಹಾಕಿದರೆ, ಸಂದೀಪ್ ಶರ್ಮ (27ಕ್ಕೆ 2) ಮತ್ತು ಟಿ. ನಟರಾಜನ್ (26ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು.

‘ಮೊದಲು ಬೌಲಿಂಗ್ ಮಾಡಲು ನಾವೇ ನಿರ್ಧರಿಸಿದ್ದೆವು. ಆದರೆ ದೊಡ್ಡ ಮೊತ್ತವನ್ನು ಬಿಟ್ಟುಕೊಟ್ಟೆವು. ಚೇಸಿಂಗ್ ವಿಚಾರದಲ್ಲಿ ನಾವು ಸುಧಾರಣೆ ಕಾಣಬೇಕಾದ ಅಗತ್ಯವಿದೆ’ ಎಂದು ಪಾಂಟಿಂಗ್ 88 ರನ್‌ಗಳ ಭಾರಿ ಸೋಲಿನ ಬಳಿಕ ನುಡಿದರು.

‘ಮುಂದಿನ 2 ಪಂದ್ಯಗಳಲ್ಲಿ ನಾವು ಮುಂಬೈ ಮತ್ತು ಆರ್‌ಸಿಬಿ ವಿರುದ್ಧ ಆಡಬೇಕಾಗಿದೆ. ಇದೇ ರೀತಿ ಆಡಿದರೆ ಆ ಪಂದ್ಯಗಳಲ್ಲಿ ಗೆಲ್ಲುವುದು ಕಷ್ಟವಾಗಲಿದೆ. ಹೀಗಾಗಿ ನಾವು ಶೀಘ್ರ ಕೆಲವೊಂದು ಬದಲಾವಣೆಗಳನ್ನು ಬದಲಾವಣೆಗಳನ್ನು ಮಾಡುವುದು ಅಗತ್ಯವಾಗಿದೆ’ ಎಂದು ಪಾಂಟಿಂಗ್ ಹೇಳಿದರು.

ರಶೀದ್ ಖಾನ್ 4 ಓವರ್‌ಗಳ ದಾಳಿಯಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಇದು ಐಪಿಎಲ್‌ನಲ್ಲಿ 4ನೇ ಅತ್ಯಂತ ನಿಯಂತ್ರಿತ ದಾಳಿಯಾಗಿದೆ. ಕಗಿಸೊ ರಬಾಡ ಐಪಿಎಲ್‌ನಲ್ಲಿ ಸತತ 25 ಪಂದ್ಯಗಳ ಬಳಿಕ ಒಂದೂ ವಿಕೆಟ್ ಕಬಳಿಸಲು ವಿಫಲರಾದರು. ಕಳೆದ 6 ಪಂದ್ಯಗಳಲ್ಲಿ ಡೆಲ್ಲಿ ಆರಂಭಿಕರು ಮೊದಲ ವಿಕೆಟ್ ಜತೆಯಾಟದಲ್ಲಿ ಒಟ್ಟು 30 ರನ್ ಮಾತ್ರ ಕೂಡಿಹಾಕಿದ್ದಾರೆ. ಸನ್‌ರೈಸರ್ಸ್‌ಗೆ ಇದು 2ನೇ ಅತಿದೊಡ್ಡ ಗೆಲುವಾಗಿದೆ. 2019ರಲ್ಲಿ ಆರ್‌ಸಿಬಿ ವಿರುದ್ಧ 118 ರನ್‌ಗಳಿಂದ ಗೆದ್ದಿದ್ದು ದೊಡ್ಡ ಗೆಲುವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net