ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್ ಟೋಕಿಯೊ ಒಲಿಂಪಿಕ್ಸ್ ಕನಸು ಭಗ್ನ?

saina sri web
Published on

ನವದೆಹಲಿ: ಭಾರತದ ಸ್ಟಾರ್ ಷಟ್ಲರ್‌ಗಳಾದ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಅವರ ಟೋಕಿಯೊ ಒಲಿಂಪಿಕ್ಸ್ ಕನಸು ಬಹುತೇಕ ಭಗ್ನಗೊಂಡಿದೆ. ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ (ಬಿಡಬ್ಲ್ಯುಎಫ್​) ಬುಧವಾರ, ಕರೊನಾ ಕಾಲದ ಪ್ರಯಾಣ ನಿರ್ಬಂಧಗಳಿಂದಾಗಿ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ರದ್ದುಗೊಳಿಸಿದೆ. ಇದು ಟೋಕಿಯೊ ಒಲಿಂಪಿಕ್ಸ್ ಟಿಕೆಟ್ ಒಲಿಸಿಕೊಳ್ಳಲು ಷಟ್ಲರ್‌ಗೆ ಕೊನೇ ಅವಕಾಶವಾಗಿತ್ತು.

ಜೂನ್ 1ರಿಂದ 6ರವರೆಗೆ ನಡೆಯಬೇಕಾಗಿದ್ದ ಸಿಂಗಾಪುರ ಓಪನ್ ಸೂಪರ್ 500 ಟೂರ್ನಿ ‘ರೇಸ್ ಟು ಟೋಕಿಯೋ ರ‌್ಯಾಂಕಿಂಗ್’ನಲ್ಲಿ ಕೊನೇ ಟೂರ್ನಿಯಾಗಿತ್ತು. ಆಟಗಾರರು ಮತ್ತು ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಟೂರ್ನಿ ರದ್ದುಗೊಂಡಿದ್ದು, ಇದನ್ನು ಮುಂದಿನ ದಿನಗಳಲ್ಲಿ ಮರುನಿಗದಿಗೊಳಿಸಲಾಗುವುದಿಲ್ಲ ಎಂದು ಬಿಡಬ್ಲ್ಯುಎಫ್​ ತಿಳಿಸಿದೆ.

ಮೇ 25ರಿಂದ 30ರವರೆಗೆ ನಡೆಯಬೇಕಾಗಿದ್ದ ಮಲೇಷ್ಯಾ ಓಪನ್ ಮುಂದೂಡಲ್ಪಟ್ಟ ಬಳಿಕ ಸೈನಾ, ಶ್ರೀಕಾಂತ್‌ಗೆ ಟೋಕಿಯೊ ಟಿಕೆಟ್ ಒಲಿಸಿಕೊಳ್ಳಲು ಸಿಂಗಾಪುರ ಓಪನ್ ಕಡೇ ಅವಕಾಶವೆನಿಸಿತ್ತು. ಒಲಿಂಪಿಕ್ಸ್ ಅರ್ಹತೆಯ ಪರಿಷ್ಕೃತ ಲೆಕ್ಕಾಚಾರವನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಬಿಡಬ್ಲ್ಯುಎಫ್​ ತಿಳಿಸಿದೆ. ಭಾರತದ ಪಿವಿ ಸಿಂಧು, ಸಾಯ್ ಪ್ರಣೀತ್ ಮತ್ತು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ಜೋಡಿಗೆ ಮಾತ್ರ ಸದ್ಯ ಟೋಕಿಯೊ ಒಲಿಂಪಿಕ್ಸ್ ಪ್ರವೇಶ ಖಚಿತವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net