ಹ್ಯಾಟ್ರಿಕ್​ ವಿಕೆಟ್​ ಕನಸು ಭಗ್ನ! ಅಕ್ಷರ್​ ಬಳಿ ಕ್ಷಮೆಯಾಚಿಸಿ ಬಿಗ್​ ಆಫರ್​ ಕೊಟ್ಟ ರೋಹಿತ್​ ಶರ್ಮ | Champions Trophy

Champions Trophy
Published on

Champions Trophy : ಮಿನಿ ವಿಶ್ವಕಪ್​ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿ ಫೆ.19ರಿಂದ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಆತಿಥೇಯ ಪಾಕಿಸ್ತಾನ ಸೋಲುಂಡಿತು. ನಿನ್ನೆ (ಫೆ.20) ನಡೆದ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ಗಳಿಂದ ಭರ್ಜರಿ ಜಯಗಳಿಸುವ ಮೂಲಕ ಉತ್ತಮ ಶುಭಾರಂಭ ಕಂಡಿದೆ. ಆದರೂ, ಆಲ್​ರೌಂಡರ್​ ಅಕ್ಷರ್ ಪಟೇಲ್​ಗೆ ಕೊಂಚ ನಿರಾಸೆ ಉಂಟಾಯಿತು. ಅದಕ್ಕೆ ಕಾರಣ ಹ್ಯಾಟ್ರಿಕ್‌ ವಿಕೆಟ್​ ಮಿಸ್​ ಆಯಿತು.

ನಾಯಕ ರೋಹಿತ್ ಶರ್ಮ ಕ್ಯಾಚ್ ಕೈಬಿಟ್ಟ ಕಾರಣ ಅಕ್ಷರ್​ ಅವರು ಹ್ಯಾಟ್ರಿಕ್​ ಅವಕಾಶವನ್ನು ಕಳೆದುಕೊಂಡರು. ಅಕ್ಷರ್, ಬಾಂಗ್ಲಾದೇಶ ಇನ್ನಿಂಗ್ಸ್‌ನ 9ನೇ ಓವರ್‌ನಲ್ಲಿ ಸತತ ಎರಡು ವಿಕೆಟ್‌ಗಳನ್ನು ಪಡೆದು ಹ್ಯಾಟ್ರಿಕ್‌ಗೆ ಹತ್ತಿರವಾದರು. ಸತತ ಎರಡು ಎಸೆತಗಳಲ್ಲಿ ತಂಜೀದ್ ಹಸನ್ (25) ಮತ್ತು ಮುಷ್ಫಿಕರ್ ರಹೀಮ್ (0) ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಜಾಕಿರ್ ಅಲಿ ಬ್ಯಾಟ್​ಗೆ ಬಡಿದ ಚೆಂಡು ಸ್ಲಿಪ್​ನಲ್ಲಿದ್ದ ರೋಹಿತ್​ ಕೈಗೆ ಸೇರಿತು. ಆದರೆ, ರೋಹಿತ್​ ಆ ಕ್ಯಾಚ್ ಅನ್ನು ಕೈಚೆಲ್ಲಿದರು. ಇದರಿಂದ ರೋಹಿತ್​ಗೂ ತುಂಬಾ ಬೇಸರವಾಯಿತು. ಇದರೊಂದಿಗೆ ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ತನ್ನ ತಪ್ಪನ್ನು ಅರ್ಥಮಾಡಿಕೊಂಡ ರೋಹಿತ್, ತಕ್ಷಣವೇ ಅಕ್ಷರ್ ಬಳಿ ಕ್ಷಮೆಯಾಚಿಸಿದರು. ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಆ ಕ್ಯಾಚ್ ತೆಗೆದುಕೊಳ್ಳಬೇಕಿತ್ತು. ಆದರೆ, ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವಾಗ, ಕೆಲವೊಮ್ಮೆ ಅಂತಹ ತಪ್ಪುಗಳು ಸಂಭವಿಸುತ್ತವೆ. ಕ್ಯಾಚ್ ಬಿಟ್ಟಿದ್ದಕ್ಕಾಗಿ ನಾನು ಅಕ್ಷರ್ ಅವರನ್ನು ನಾಳೆ ಭೋಜನಕ್ಕೆ ಕರೆದೊಯ್ಯುತ್ತೇನೆ ಎಂದು ತಮಾಷೆಯಾಗಿ ಹೇಳಿದರು.

ಒಂದು ವೇಳೆ ರೋಹಿತ್ ಆ ಕ್ಯಾಚ್ ಹಿಡಿದ್ದಿದ್ದರೆ, ಬಾಂಗ್ಲಾದೇಶ 200ರನ್ ದಾಟುವ ಸ್ಥಿತಿಯಲ್ಲಿರುತ್ತಿರಲಿಲ್ಲ. ಆದರೆ, ಜಾಕಿರ್ ಅಲಿ (68) ಮತ್ತು ತೌಹಿದ್ ಹೃದಯ್ (100) ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡಿದರು ಮತ್ತು ತಂಡವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ದರು.

ಈ ಪಂದ್ಯದಲ್ಲಿ ಅಕ್ಷರ್ 9 ಓವರ್ ಬೌಲಿಂಗ್ ಮಾಡಿ 43 ರನ್ ನೀಡಿ 2 ವಿಕೆಟ್ ಪಡೆದರು. ಹ್ಯಾಟ್ರಿಕ್ ಅವಕಾಶವನ್ನು ಕಳೆದುಕೊಂಡರೂ, ತಮ್ಮ ಬೌಲಿಂಗ್ ಮೂಲಕ ಬಾಂಗ್ಲಾದೇಶದ ಮೇಲೆ ಒತ್ತಡವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದೆಡೆ, ಕಮ್‌ಬ್ಯಾಕ್ ಹೀರೋ ಶಮಿ 5 ವಿಕೆಟ್‌ಗಳೊಂದಿಗೆ ಬಾಂಗ್ಲಾದೇಶವನ್ನು ಪತನ ಮಾಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net