ಜಿಗುಬಾ ಕತೆ ಕದ್ದು ರೋಬೋ ಚಿತ್ರ ಮಾಡಿದ ಶಂಕರ್​ಗೆ ಶಾಕ್​! 10 ಕೋಟಿ ರೂ. ಮೌಲ್ಯದ ಆಸ್ತಿ ಸೀಜ್ | Director Shankar

Director Shankar
Published on

Director Shankar : ಕಾಲಿವುಡ್​ನ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಎಸ್​​. ಶಂಕರ್ ಇದೀಗ ಸಂಕಷ್ಟಕ್ಕೆ ಸಿಲುಕ್ಕಿದ್ದು, ಅವರ ನಿರ್ದೇಶನದ ರೋಬೋ ಚಿತ್ರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಆಘಾತ ನೀಡಿದೆ. ಶಂಕರ್​ಗೆ ಸಂಬಂಧಿಸಿದ 10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ತಿಂಗಳ 17 ರಂದು ಶಂಕರ್ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ. ರೋಬೋ​ ಚಿತ್ರದ ಕಾಪಿರೈಟ್​ ಉಲ್ಲಂಘನೆಯ ಪ್ರಕರಣದಲ್ಲಿ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಏನಿದು ಪ್ರಕರಣ?

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ರೋಬೋ ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಆಗಿದ್ದು ನಿಮಗೆಲ್ಲ ಗೊತ್ತೇ ಇದೆ. ಶಂಕರ್ ನಿರ್ದೇಶಿಸಿದ ಈ ಸೈನ್ಸ್​ ಫಿಕ್ಸನ್​ ಆಕ್ಷನ್ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿತು. ಶಂಕರ್ ಅವರು ಈ ಸಿನಿಮಾವನ್ನು ಎಂಥಿರನ್ ಎಂಬ ಹೆಸರಿನಲ್ಲಿ ತಮಿಳಿನಲ್ಲಿ ನಿರ್ದೇಶಿಸಿದರು. ಬೇರೆ ಭಾಷೆಗಳಲ್ಲೂ ಈ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡಿತು. ಆದರೆ, ಆರೂರ್ ತಮಿಳನಾಥನ್ ಎಂಬ ವ್ಯಕ್ತಿ 2011ರಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ಈ ಕತೆಯನ್ನು 'ಜಿಗುಬಾ'ದಿಂದ ನಕಲು ಮಾಡಿ ಸಿನಿಮಾ ಮಾಡಲಾಗಿದ್ದು, ಕಾಪಿರೈಟ್​ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ, ಶಂಕರ್ ವಿರುದ್ಧ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII)ಯು ಸಹ ವರದಿ ನೀಡಿತು. ಹೀಗಾಗಿ ಜಿಗುಬಾ ಕತೆ ಮತ್ತು ರೋಬೋ ಸಿನಿಮಾದ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ತೀರ್ಮಾನಿಸಲಾಯಿತು. ಶಂಕರ್ ಅವರು ಕಾಪಿರೈಟ್​ ಕಾಯ್ದೆಯ ಸೆಕ್ಷನ್ 63 ಅನ್ನು ಉಲ್ಲಂಘಿಸಿದ್ದಾರೆ ಎಂದು ಇಡಿ ಹೇಳಿದೆ. ಸಂಪೂರ್ಣ ತನಿಖೆಯ ನಂತರ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಜಿಗುಬಾ?

ಆರೂರ್ ತಮಿಳುನಾಥನ್​ ಅವರು ಬರೆದ ಜಿಗುಬಾ ಕತೆ 1996 ರಲ್ಲಿ ತಮಿಳು ನಿಯತಕಾಲಿಕೆಯಲ್ಲಿ ಪ್ರಕಟವಾಯಿತು. ಅಲ್ಲದೆ, ಮತ್ತೊಮ್ಮೆ 2002 ರಲ್ಲಿ ಧಿಕ್ ಧಿಕ್ ದೀಪಿಕಾ ದೀಪಿಕಾ ಎಂಬ ಶೀರ್ಷಿಕೆಯ ಕಾದಂಬರಿಯಾಗಿ ಮರುಪ್ರಕಟಿಸಲಾಯಿತು. ಎಂಥಿರನ್ ಸಿನಿಮಾ ಬಿಡುಗಡೆಯಾದ ನಂತರ, ಬರಹಗಾರ ತಮಿಳುನಾಥ್​, ಶಂಕರ್ ಅವರು ತನ್ನ ಕಥೆಯನ್ನು ಕಾಪಿ ಮಾಡಿದ್ದು, ಇದು 1957ರ ಕಾಪಿರೈಟ್​ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ದೂರು ದಾಖಲಿಸಿದ್ದರು.

ಅಂದಹಾಗೆ ರೋಬೋ ಸಿನಿಮಾ 2010 ರಲ್ಲಿ ಬಿಡುಗಡೆಯಾಯಿತು. ರಜನಿಕಾಂತ್ ಮತ್ತು ಐಶ್ವರ್ಯಾ ರೈ ನಟಿಸಿದ ಈ ಚಿತ್ರವು ವಿಶ್ವಾದ್ಯಂತ ಸೂಪರ್ ಹಿಟ್ ಆಗಿತ್ತು. ಈ ಚಿತ್ರವು ಸುಮಾರು 300 ಕೋಟಿ ರೂ.ಗಳ ಒಟ್ಟು ಸಂಗ್ರಹವನ್ನು ಗಳಿಸಿತು. ನಿರ್ದೇಶಕ ಶಂಕರ್ ಈ ಚಿತ್ರಕ್ಕಾಗಿ 11.5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಇಡಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net