ಭಾರತದಿಂದಾಗಿ ಪಾಕಿಸ್ತಾನದ ಲೆಕ್ಕಾಚಾರವೆಲ್ಲ ತಲೆಕೆಳಗಾಯ್ತು: ಇದಕ್ಕಿಂತ ದೊಡ್ಡ ಮುಖಭಂಗ ಇನ್ನೊಂದಿಲ್ಲ! Champions Trophy

Champions Trophy
Published on

Champions Trophy : ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಅಂತಿಮ ಹಂತಕ್ಕೆ ಬಂದಿದೆ. ಒಂದು ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳು ಮಾತ್ರ ಬಾಕಿ ಇದೆ. ನಿನ್ನೆ (ಮಾ.04) ನಡೆದ ಮೊದಲ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಟೀಮ್​ ಇಂಡಿಯಾ ಫೈನಲ್​ ತಲುಪಿದೆ. ಇಂದು ನಡೆಯಲಿರುವ ಮತ್ತೊಂದು ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್​ ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆದ್ದವರು ಮಾರ್ಚ್​ 9ರಂದು ನಡೆಯಲಿರುವ ಫೈನಲ್​ ಪಂದ್ಯದಲ್ಲಿ ಭಾರತದ ವಿರುದ್ಧ ಟ್ರೋಫಿಗಾಗಿ ಪೈಪೋಟಿ ನಡೆಸಲಿದೆ.

ಭಾರತ ಫೈನಲ್​ ತಲುಪಿರುವುದು ಭಾರತೀಯರಿಗೆ ಬಹಳ ಖುಷಿಯ ವಿಚಾರ. ಆದರೆ, ಪಾಕಿಸ್ತಾನಕ್ಕೆ ಮಾತ್ರ ನುಂಗಲಾರದ ತುತ್ತಾಗಿದೆ. ಕಾರಣವೇನೆಂದರೆ, ಚಾಂಪಿಯನ್ಸ್​ ಟ್ರೋಫಿಯನ್ನು ಆಯೋಜನೆ ಮಾಡಿರುವುದು ಪಾಕಿಸ್ತಾನ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಫೈನಲ್​ ಪಂದ್ಯ ಪಾಕಿಸ್ತಾನದಲ್ಲೇ ನಡೆಯುವುದಿಲ್ಲ. ಬದಲಿಗೆ ದುಬೈನಲ್ಲಿ ನಡೆಯಲಿದೆ. ಟೂರ್ನಿಯನ್ನು ಆಯೋಜಿಸಿರುವ ಪಾಕಿಸ್ತಾನವೇ ಇದೀಗ ದುಬೈ ಬಂದು ಫೈನಲ್​ ಪಂದ್ಯವನ್ನು ನಡೆಸಿಕೊಡಬೇಕಿದೆ. ಇದಕ್ಕಿಂತ ದೊಡ್ಡ ದುರಾದೃಷ್ಟ ಇನ್ನೊಂದಿಲ್ಲ ಎಂದು ಹೇಳಬಹುದು.

ಟೂರ್ನಿಯ ಆರಂಭಕ್ಕೂ ಮುನ್ನ ಭಾರತ ತಂಡ ಪಾಕಿಸ್ತಾನಕ್ಕೆ ಬರಬೇಕೆಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಪಟ್ಟು ಹಿಡಿದಿತ್ತು. ಆದರೆ, ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ ಇದಕ್ಕೆ ಒಪ್ಪಲಿಲ್ಲ. ಭದ್ರತಾ ದೃಷ್ಟಿಯಿಂದ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸುವಂತೆ ಐಸಿಸಿ ಮುಂದೆ ಕೇಳಿಕೊಂಡಿತು. ಪಾಕಿಸ್ತಾನ ಮಾತ್ರ ಇದನ್ನು ವಿರೋಧಿಸುತ್ತಾ ಬಂತು. ಆದರೆ, ಐಸಿಸಿ ಒತ್ತಾಯಕ್ಕೆ ಮಣಿದ ಪಾಕ್​, ಕೊನೆಗೂ ಹೈಬ್ರಿಡ್​ ಮಾದರಿಯಲ್ಲಿ ನಡೆಸಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿತು. ಅದರಂತೆ ಭಾರತದ ಪಂದ್ಯಗಳು ದುಬೈನಲ್ಲಿ ನಡೆಯುತ್ತಿವೆ.

ಇದೀಗ ಟೀಮ್​ ಇಂಡಿಯಾ ಫೈನಲ್​ ತಲುಪಿರುವುದರಿಂದ ಆ ಪಂದ್ಯವೂ ಕೂಡ ದುಬೈನಲ್ಲೇ ನಡೆಯಲಿದೆ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ನಿರಾಸೆ ಉಂಟಾಗಿದೆ. ಲಾಹೋರ್​ನ ಗಡಾಫಿ ಕ್ರೀಡಾಂಗಣದಲ್ಲಿ ಫೈನಲ್​ ಪಂದ್ಯವನ್ನು ಆಯೋಜಿಸಲು ಪಾಕಿಸ್ತಾನ ಬಯಸಿತ್ತು. ಫೈನಲ್​ ಪಂದ್ಯ ಪಾಕ್​ನಲ್ಲಿ ನಡೆದರೆ, ಆರ್ಥಿಕವಾಗಿ ಕೊಂಚ ನೆರವಾಗಲಿದೆ ಎಂಬ ಲೆಕ್ಕಾಚಾರವು ಕೂಡ ಪಾಕಿಸ್ತಾನದ್ದಾಗಿತ್ತು.​ ಆದರೆ, ಈಗ ಪಾಕ್​ ಕನಸು ನುಚ್ಚು ನೂರಾಗಿದೆ. ಫೈನಲ್​ ಪಂದ್ಯ ದುಬೈನಲ್ಲಿ ನಡೆಯುವುದರಿಂದ ಪಾಕಿಸ್ತಾನವೇ ದುಬೈ ಹೋಗಬೇಕಿದೆ.

ಇನ್ನು ಒಂದು ಸೆಮಿಫೈನಲ್​ ಪಂದ್ಯ ಕೂಡ ದುಬೈನಲ್ಲಿ ನಡೆಯಿತು. ಅಲ್ಲದೆ, ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಮೂರು ಲೀಗ್​ ಪಂದ್ಯಗಳು ಮಳೆಯಿಂದ ರದ್ದಾದವು. ಇನ್ನು ಭಾರತದ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆದಿವೆ. ಇದೀಗ ಫೈನಲ್​ ಕೂಡ ದುಬೈನಲ್ಲಿ ನಡೆಯಲಿದ್ದು, ಟೂರ್ನಿಯನ್ನು ಆಯೋಜಿಸಿರುವ ಪಾಕಿಸ್ತಾನಕ್ಕೆ ಇದಕ್ಕಿಂತ ಮುಖಭಂಗ ಮತ್ತೊಂದಿಲ್ಲ ಎನ್ನುವಂತಾಗಿದೆ.

ಪಾಕಿಸ್ತಾನದ ಈ ಸ್ಥಿತಿಯನ್ನು ನೋಡಿ ನೆಟ್ಟಿಗರೆಲ್ಲ ಪಾಕ್​ ತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದಾರೆ. ಚಾಂಪಿಯನ್ಸ್​ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಿದೆ. ಆದರೆ, ಪಾಕಿಸ್ತಾನವೇ ಚಾಂಪಿಯನ್ಸ್​ ಟ್ರೋಫಿಯಲ್ಲಿಲ್ಲ. ಫೈನಲ್​ ಪಂದ್ಯ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ, ಫೈನಲ್​ನಲ್ಲಿ ಪಾಕಿಸ್ತಾನ ಇಲ್ಲ. ಇದೀಗ ಭಾರತ ಫೈನಲ್​ನಲ್ಲಿದೆ. ಹೀಗಾಗಿ ಫೈನಲ್​ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲ್ಲ. ಪಾಕಿಸ್ತಾನ ಅಲ್ಲ ಅಜೀಬ್​​​ಸ್ತಾನ ಎಂದು ನೆಟ್ಟಿಗರೊಬ್ಬರು ಟ್ರೋಲ್​ ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net