ಚಾಂಪಿಯನ್ಸ್​ ಟ್ರೋಫಿ ಫೈನಲ್​​ಗೆ ಲಗ್ಗೆಯಿಟ್ಟ ಭಾರತ: ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ರೋಹಿತ್​! Virat Kohli

Virat Kohli
Published on

Virat Kohli : ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ವಿಜಯೋತ್ಸವ ಮುಂದುವರೆದಿದೆ. ಸತತ ಗೆಲುವುಗಳೊಂದಿಗೆ ಫೈನಲ್ ತಲುಪಿರುವ ಭಾರತಕ್ಕೆ ಟ್ರೋಫಿ ಜಯಿಸಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ.

ಮಂಗಳವಾರ (ಮಾರ್ಚ್​ 04) ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 48.1 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿಯನ್ನು ಬೆನ್ನಟ್ಟಿತು. ಇದರೊಂದಿಗೆ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ಮಾರ್ಚ್ 9 ರಂದು ಫೈನಲ್​ ಪಂದ್ಯ ನಡೆಯಲಿದೆ.

ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ಮಾತನಾಡಿ, ತಂಡದ ಆಯ್ಕೆಯ ಸಮಯದಲ್ಲಿ, ಅಂತಿಮ ತಂಡದಲ್ಲಿ ಆರು ಬೌಲರ್‌ಗಳನ್ನು ಹೊಂದಲು ನಾವು ಯೋಜಿಸಿದ್ದೆವು. ಅದೇ ಸಮಯದಲ್ಲಿ, ಕೆಳ ಹಂತದವರೆಗೆ ಬ್ಯಾಟಿಂಗ್ ಕ್ರಮಾಂಕವು ಬಲಿಷ್ಠವಾಗಿರಬೇಕು ಎಂದು ನಾವು ಭಾವಿಸಿದ್ದೆವು. ಆದಾಗ್ಯೂ, ಆಸ್ಟ್ರೇಲಿಯಾ ವಿರುದ್ಧದ ಗೆಲುವು ಎಲ್ಲರ ಸಾಮೂಹಿಕ ಪ್ರಯತ್ನವಾಗಿದೆ ಎಂದು ರೋಹಿತ್​ ಹೇಳಿದರು.

ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ರೋಹಿತ್​, ವಿರಾಟ್ ಹಲವು ವರ್ಷಗಳಿಂದ ತಂಡಕ್ಕಾಗಿ ಆಡುತ್ತಿದ್ದಾರೆ. ಶ್ರೇಯಸ್ ಅಯ್ಯರ್ ಮತ್ತು ವಿರಾಟ್ ಕೊಹ್ಲಿ ಅವರಿಂದ ನಾವು ದೊಡ್ಡ ಜೊತೆಯಾಟವನ್ನು ನಿರೀಕ್ಷೆ ಮಾಡಿದ್ದೆವು. ಅದರಂತೆ ವಿರಾಟ್ ಕೊಹ್ಲಿ (84 ರನ್) ಅತ್ಯುತ್ತಮ ಪ್ರದರ್ಶನ ನೀಡಿದರು. ಕೊನೆಯ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯ ಅವರನ್ನು ಸಹ ರೋಹಿತ್ ಶ್ಲಾಘಿಸಿದರು. ನಾವು ಫೈನಲ್‌ನಲ್ಲಿ ಖಂಡಿತವಾಗಿಯೂ ಗೆಲ್ಲುತ್ತೇವೆ ಎಂದು ರೋಹಿತ್ ಶರ್ಮ ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮ ಅಪರೂಪದ ದಾಖಲೆಯನ್ನು ಮಾಡಿದ್ದಾರೆ. ಅವರ ನಾಯಕತ್ವದಲ್ಲಿ, ಅವರು ಎಲ್ಲ ಐಸಿಸಿ ಪಂದ್ಯಾವಳಿಗಳಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ದ ಮೊದಲ ನಾಯಕರಾಗಿದ್ದಾರೆ. ಭಾರತೀಯ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, 2023ರ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್ ಮತ್ತು 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ಗಳನ್ನು ತಲುಪಿದೆ. ಆದಾಗ್ಯೂ, ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಳೆದ ವರ್ಷದ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು. ಆದರೆ, 2023ರ ಡಬ್ಲ್ಯೂಟಿಸಿ ಫೈನಲ್ ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿ ಮುಗಿಸಿತು.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಭರ್ಜರಿ ಗೆಲುವಿನ ಓಟ ಮುಂದುವರಿಸಿರುವ ಟೀಮ್ ಇಂಡಿಯಾ, 8 ವರ್ಷಗಳ ಬಳಿಕ ಪುನಾರಂಭಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಐದನೇ ಬಾರಿಗೆ ಫೈನಲ್‌ಗೇರಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಸಮಯೋಚಿತ ಆಟ ಹಾಗೂ ವೇಗಿ ಮೊಹಮದ್ ಶಮಿ (48ಕ್ಕೆ 3) ಸಹಿತ ಇತರ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಕಡಿಮೆಗೊಳಿಸಿದೆ. ನ್ಯೂಜಿಲೆಂಡ್ ಹಾಗೂ ದ.ಆಫ್ರಿಕಾ ನಡುವಿನ ವಿಜೇತರ ಎದುರು ಭಾರತ ತಂಡ ಭಾನುವಾರ ದುಬೈನಲ್ಲೇ ಪ್ರಶಸ್ತಿಗಾಗಿ ಕಾದಾಡಲಿದೆ.

ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿಯಿತು. ನಾಯಕ ಸ್ಟೀವನ್ ಸ್ಮಿತ್ (73 ರನ್, 96 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ (61 ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನಡುವೆಯೂ ಭಾರತೀಯರ ಸಂಘಟಿತ ದಾಳಿಗೆ ನಲುಗಿದ ಆಸೀಸ್ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ 43 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ 36 ವರ್ಷದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (45 ರನ್, 62 ಎಸೆತ, 3 ಬೌಂಡರಿ) ಅಮೂಲ್ಯ ಜತೆಯಾಟದ ಮೂಲಕ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ (42* ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net