

Virender Sehwag : ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ಹಿನ್ನೆಲೆಯಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಕೆಲವು ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಜತೆ 'ಅನ್ಕ್ಯಾಪ್ಡ್' ಆಟಗಾರನನ್ನು ಆರಂಭಿಕನಾಗಿ ಕಳುಹಿಸಬೇಕೆಂದು ಸೆಹ್ವಾಗ್ ಸೂಚಿಸಿದ್ದಾರೆ. ಈ ಮೂಲಕ ಶುಭಮನ್ ಗಿಲ್ ಅವರನ್ನು ಕೈಬಿಡುವಂತೆ ಆಯ್ಕೆದಾರರಿಗೆ ಪರೋಕ್ಷವಾಗಿ ಸಲಹೆ ನೀಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಪಾಕಿಸ್ತಾನ ಆತಿಥ್ಯ ವಹಿಸಲಿದೆ. ರಾಜಕೀಯ ಸಮಸ್ಯೆಗಳಿಂದಾಗಿ, ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ಯುಎಇಯಲ್ಲಿ ಆಡಲಿದೆ. ಇದರೊಂದಿಗೆ ಒಂದು ಸೆಮಿಫೈನಲ್ ಪಂದ್ಯವನ್ನು ಕೂಡ ಯುಎಇಯಲ್ಲಿಯೇ ನಡೆಸಲಾಗುತ್ತದೆ. ಆದರೆ, ಫೈನಲ್ ಪಂದ್ಯಕ್ಕೆ ಇನ್ನೂ ಸ್ಥಳ ಅಂತಿಮಗೊಂಡಿಲ್ಲ. ಭಾರತ ಫೈನಲ್ಗೆ ಪ್ರವೇಶಿಸಿದರೆ, ಆ ಪಂದ್ಯವನ್ನು ಯುಎಇಯಲ್ಲಿ ನಡೆಸಲಾಗುತ್ತದೆ. ಭಾರತ ಬಿಟ್ಟು ಬೇರೆ ಯಾವುದೇ ತಂಡಗಳು ಫೈನಲ್ ತಲುಪಿದರೆ, ಪಾಕಿಸ್ತಾನದಲ್ಲೇ ಆ ಪಂದ್ಯ ನಡೆಯಲಿದೆ.
ಈ ಮೆಗಾ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೆಬ್ರವರಿ 20ರಂದು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಚಾಂಪಿಯನ್ಸ್ ಟ್ರೋಫಿಗೆ ತಂಡವನ್ನು ಘೋಷಿಸಲು ಐಸಿಸಿ ಜನವರಿ 13 ರವರೆಗೆ ಗಡುವು ವಿಧಿಸಿದ್ದರೂ, ಬಿಸಿಸಿಐ ವಿನಾಯಿತಿ ಕೋರಿದೆ. ಜನವರಿ 17 ರೊಳಗೆ ತನ್ನ ತಂಡವನ್ನು ಘೋಷಿಸುವುದಾಗಿ ಹೇಳಿದ್ದರೂ, ಇಲ್ಲಿಯವರೆಗೆ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದೇ ಸಂದರ್ಭದಲ್ಲಿ ವೀರೇಂದ್ರ ಸೆಹ್ವಾಗ್ ಅವರು ತಂಡದ ಆಯ್ಕೆ ವಿಚಾರವಾಗಿ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ್ದಾರೆ.
ಆಯ್ಕೆದಾರರಿಗೆ ನನ್ನ ಸಲಹೆ ಏನೆಂದರೆ ಯಶಸ್ವಿ ಜೈಸ್ವಾಲ್ ಅವರನ್ನು 50 ಓವರ್ಗಳ ಸ್ವರೂಪದಲ್ಲಿಯೂ ಆಡಿಸಬೇಕು. ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಶೈಲಿ ಅದ್ಭುತವಾಗಿದೆ. ಅವರು ಏಕದಿನ ಸ್ವರೂಪಕ್ಕೂ ಸೂಕ್ತರು. ಅವರನ್ನು ಖಂಡಿತವಾಗಿಯೂ ಭಾರತದ ಏಕದಿನ ತಂಡದಲ್ಲಿ ಸೇರಿಸಿಕೊಳ್ಳಬೇಕು ಎಂದು ವೀರೂ ಸಲಹೆ ನೀಡಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಟೀಮ್ ಇಂಡಿಯಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ವಿಕೆಟ್ ಕೀಪರ್ ಕಂ ಬ್ಯಾಟ್ಸ್ಮನ್ ಆಗಿ ತಮ್ಮ ಮೊದಲ ಮತ ಸಂಜು ಸ್ಯಾಮ್ಸನ್ಗೆ ಎಂದು ಹೇಳಿದ್ದಾರೆ. ಸೆಹ್ವಾಗ್ ಆರಂಭಿಕ ಜೋಡಿಯಾಗಿ ರೋಹಿತ್ ಮತ್ತು ಜೈಸ್ವಾಲ್ ಅವರ ಹೆಸರುಗಳನ್ನು ಸೂಚಿಸಿದರೆ, ಭಜ್ಜಿ ರಿಷಭ್ ಪಂತ್ಗಿಂತ ಸಂಜು ಸ್ಯಾಮ್ಸನ್ಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಮುಂಬೈ ಮೂಲದ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ (171) ಗಳಿಸಿದ ಜೈಸ್ವಾಲ್ ಅವರ ಹೆಸರಿನಲ್ಲಿ ಎರಡು ದ್ವಿಶತಕಗಳಿವೆ. ಇದುವರೆಗೆ ಭಾರತ ಪರ 19 ಟೆಸ್ಟ್ ಮತ್ತು 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆಯಾ ಸ್ವರೂಪಗಳಲ್ಲಿ 1798 ಮತ್ತು 723 ರನ್ ಗಳಿಸಿದ್ದಾರೆ. ಆದಾಗ್ಯೂ, ಜೈಸ್ವಾಲ್ ಇನ್ನೂ ಏಕದಿನ ಪಂದ್ಯಗಳಲ್ಲಿ ಆಡಲು ಅವಕಾಶ ಪಡೆದಿಲ್ಲ.
ಶುಭಮನ್ ಗಿಲ್ ಅವರು ಏಕದಿನ ಸ್ವರೂಪದಲ್ಲಿ ರೋಹಿತ್ ಶರ್ಮ ಜೊತೆಗೆ ಬ್ಯಾಟಿಂಗ್ ಆರಂಭಿಸುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಿಲ್ ತಮ್ಮ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಇದೇ ಸಂದರ್ಭದಲ್ಲಿ, ವೀರೇಂದ್ರ ಸೆಹ್ವಾಗ್ ಯಶಸ್ವಿ ಜೈಸ್ವಾಲ್ ಹೆಸರನ್ನು ಉಲ್ಲೇಖಿಸಿದ್ದು ಗಮನಾರ್ಹ. ಲಿಸ್ಟ್-'ಎ' ಕ್ರಿಕೆಟ್ನಲ್ಲಿ ಜೈಸ್ವಾಲ್ ಅವರ ಅಂಕಿಅಂಶಗಳು ಉತ್ತಮವಾಗಿವೆ. ಕೇವಲ 32 ಪಂದ್ಯಗಳಲ್ಲಿ, ಅವರು ಐದು ಶತಕಗಳು, ಏಳು ಅರ್ಧಶತಕಗಳು ಮತ್ತು ಒಂದು ದ್ವಿಶತಕದ ಸಹಾಯದಿಂದ 1511 ರನ್ ಗಳಿಸಿದ್ದಾರೆ. (ಏಜೆನ್ಸೀಸ್)