

MS Dhoni : ತಾನೇ ಆಯೋಜನೆ ಮಾಡಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ಪ್ರಯಾಣ ನಿರಾಸೆಯೊಂದಿಗೆ ಅಂತ್ಯಗೊಂಡಿದೆ. ಹಾಲಿ ಚಾಂಪಿಯನ್ ಆಗಿ ಟೂರ್ನಿ ಪ್ರವೇಶಿಸಿದ್ದ ಪಾಕಿಸ್ತಾನ, ಕಳಪೆ ಪ್ರದರ್ಶನದೊಂದಿಗೆ ಟೂರ್ನಿಯಿಂದ ನಿರ್ಗಮಿಸಿದೆ.
ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರ ತೀವ್ರ ಟೀಕೆಗೆ ಪಾಕ್ ತಂಡ ಗುರಿಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಮಹಿಳಾ ತಂಡದ ಮಾಜಿ ನಾಯಕಿ ಸನಾ ಮಿರ್ ಮಾಡಿರುವ ಕಾಮೆಂಟ್‌ಗಳು ಇದೀಗ ವೈರಲ್ ಆಗುತ್ತಿವೆ.
ಪಾಕಿಸ್ತಾನ ಆಟಗಾರರ ಆಯ್ಕೆಯೇ ಸರಿಯಾಗಿಲ್ಲ. ಪ್ರಸ್ತತ ತಂಡದ ನಾಯಕತ್ವವನ್ನು ಎಂ.ಎಸ್. ಧೋನಿಗೆ ನೀಡಿದರು ಕೂಡ ಯಾವುದೇ ಪ್ರಯೋಜನವಿಲ್ಲ ಎಂದು ಸನಾ ಮಿರ್ ಟೀಕಿಸಿದ್ದಾರೆ.
ಅಂದಹಾಗೆ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಟೀಮ್ ಇಂಡಿಯಾಗೆ ಎರಡು ವಿಶ್ವಕಪ್ (2007 ಟಿ20 ಮತ್ತು 2011 ಏಕದಿನ ವಿಶ್ವಕಪ್) ತಂದುಕೊಟ್ಟಿದ್ದಾರೆ. ಇದಿಷ್ಟೇ ಅಲ್ಲದೆ, 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಸಹ ಗೆದ್ದರು. ಯಾವುದೇ ಪರಿಸ್ಥಿತಿಯಲ್ಲಿಯೂ ತಾಳ್ಮೆಯನ್ನು ಕಳೆದುಕೊಳ್ಳದ ಮತ್ತು ತಮ್ಮ ಆಟಗಾರರು ವಿಫಲವಾದಾಗಲೂ ಅವರ ಪರವಾಗಿ ನಿಂತು ಅವರಲ್ಲಿ ಅತ್ಯುತ್ತಮವಾದದ್ದನ್ನು ಹೊರತರುವ ತಮ್ಮ ಸಾಮರ್ಥ್ಯದಿಂದಾಗಿಯೇ ಧೋನಿ ಅವರು ಹೆಸರುವಾಸಿಯಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾದ 15 ಆಟಗಾರರನ್ನು ಹೊಂದಿರುವ ಪಾಕಿಸ್ತಾನ ತಂಡದ ನಾಯಕರಾಗಿ ನೀವು ಎಂಎಸ್ ಧೋನಿ ಅಥವಾ ಯೂನಿಸ್ ಖಾನ್ ಅವರನ್ನು ಆಯ್ಕೆ ಮಾಡಿದರೂ, ಅವರು ಈ ತಂಡದಿಂದ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಸಂದರ್ಭಗಳನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡಿಲ್ಲ ಎಂದು ಸನಾ ಮೀರ್ ಆಕ್ರೋಶ ಹೊರಹಾಕಿದ್ದಾರೆ.
ತಂಡವನ್ನು ಆಯ್ಕೆ ಮಾಡಿದಾಗಲೇ ನನಗೆ ತಿಳಿದಿತ್ತು. ಭಾರತ ವಿರುದ್ಧ ಪಾಕಿಸ್ತಾನ ಸೋಲುತ್ತದೆ ಎಂಬುದು ಖಚಿತವಾಗಿತ್ತು. ದುಬೈನಲ್ಲಿನ ಪಿಚ್ ಪರಿಸ್ಥಿತಿಗಳು ಸ್ಪಿನ್ಗೆ ಉಪಯುಕ್ತವಾಗಿವೆ. ಆಯ್ಕೆದಾರರು ಅದಕ್ಕೆ ಅನುಗುಣವಾಗಿ ಸರಿಯಾದ ತಂಡವನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸನಾ ಹೇಳಿದ್ದಾರೆ.
15 ಜನರ ತಂಡವನ್ನು ಆಯ್ಕೆ ಮಾಡಿದಾಗ, ಟೂರ್ನಿಗಳಲ್ಲಿ ಅರ್ಧದಷ್ಟು ಪಂದ್ಯಗಳನ್ನು ಸೋತಂತೆ ನನಗೆ ಅಂದೇ ಭಾಸವಾಯಿತು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಎರಡು ಸರಣಿಗಳಲ್ಲಿ ಉತ್ತಮವಾಗಿ ಆಡಿದ ಪ್ರಮುಖ ಆಟಗಾರರನ್ನೇ ಆಯ್ಕೆ ಸಮಿತಿ ಕೈಬಿಟ್ಟಿತು ಎಂದು ಪಿಸಿಬಿ ವಿರುದ್ಧ ಸನಾ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಪಾಕ್ ತಂಡವೇ ಸರಿಯಿಲ್ಲ ಎಂದು ಸನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)