

ಮುಂಬೈ: ದಿಗ್ಗಜ ಸುನೀಲ್ ಗಾವಸ್ಕರ್ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕಂಡ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. 70, 80ರ ದಶಕದಲ್ಲಿ ಭಾರತ ತಂಡಕ್ಕೆ ಬೆನ್ನೆಲುಬಾಗಿದ್ದವರು ಗಾವಸ್ಕರ್. ಮುಂದಿನ ವರ್ಷದ ಮಾರ್ಚ್ ತಿಂಗಳಿಗೆ ಗಾವಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 50 ವರ್ಷ ಪೂರೈಸುತ್ತಿದೆ. 1971ರಲ್ಲಿ ಪೋರ್ಟ್ ಅಫ್ ಸ್ಪೇನ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಪಂದ್ಯವಾಡಿದ್ದರು. ದಿಗ್ಗಜ ಆಟಗಾರನ ಟೆಸ್ಟ್ ಜೀವನದ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಸನ್ನದ್ಧವಾಗಿದೆ.
71 ವರ್ಷದ ಸುನೀಲ್ ಗಾವಸ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ 10 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್. 125 ಟೆಸ್ಟ್ ಪಂದ್ಯಗಳಿಂದ 34 ಶತಕ ಸೇರಿದಂತೆ 10122 ರನ್ ಬಾರಿಸಿದ್ದಾರೆ. 108 ಏಕದಿನ ಪಂದ್ಯಗಳಿಂದ ಏಕೈಕ ಶತಕದೊಂದಿಗೆ 3092 ರನ್ ಕಲೆಹಾಕಿದ್ದಾರೆ. 2021ರ ಮಾರ್ಚ್ 6ನೇ ತಾರೀಕಿಗೆ ಗಾವಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 50 ವರ್ಷವಾಗುತ್ತದೆ. ಈ ಸಂದರ್ಭವನ್ನು ವಿಶೇಷವಾಗಿ ಆಚರಿಸಲಾಗುವುದು. ಈ ಕುರಿತು ಆಗಸ್ಟ್ 18 ರಂದು ನಡೆಯಲಿರುವ ವಾರ್ಷಿಕ ಮಹಾ ಸಭೆಯಲ್ಲಿ ಈ ಕುರಿತು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಂಸಿಎ ಸದಸ್ಯರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸಚಿನ್ ತೆಂಡುಲ್ಕರ್ ಮೊದಲ ಶತಕಕ್ಕೆ 30 ವರ್ಷದ ಸಂಭ್ರಮ
ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯೂಸಿಯಂ ನಿಮಿರ್ಸಲು ಯೋಜನೆ ರೂಪಿಸುತ್ತಿರುವುದಾಗಿ ಎಂಸಿಎ ಅಪೆಕ್ಸ್ ಕೌನ್ಸಿಲ್ ಕೌನ್ಸಿಲ್ ಸದಸ್ಯರೊಬ್ಬರು ತಿಳಿಸಿದ್ದಾರೆ.