

ಸೌಥಾಂಪ್ಟನ್: ಪಾಕಿಸ್ತಾನದ ಫವಾದ್ ಅಲಂ, ರಾಷ್ಟ್ರೀಯ ಟೆಸ್ಟ್ ತಂಡಕ್ಕೆ ವಾಪಸಾಗಲು ಬರೋಬ್ಬರಿ 11 ವರ್ಷ ಕಾದಿದ್ದರು. 2009ರ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ತಂಡದ ಹನ್ನೊಂದರ ಬಳಗದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ಫವಾದ್, ಶೂನ್ಯ ಸುತ್ತುವ ಮೂಲಕ ಆಯ್ಕೆಗಾರರ ನಿರೀಕ್ಷೆ ಹುಸಿಗೊಳಿಸಿದರು. ರೋಸ್ ಬೌಲ್ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಆರಂಭಿಕ ಕುಸಿತ ಅನುಭವಿಸಿತು.ಮಧ್ಯಮ ಕ್ರಮಾಂಕದಲ್ಲಿ ಫವಾದ್ ಮೇಲೆ ಭರವಸೆ ಇಟ್ಟಿದ್ದರೂ ವೈಫಲ್ಯ ಅನುಭವಿಸಿದರು. ಇದರ ಬೆನ್ನಲ್ಲೆ ನೆಟ್ಟಿಗರು ಪಾಕ್ ಆಟಗಾರನನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.
2009ರ ನವೆಂಬರ್ನಲ್ಲಿ ಕಡೇ ಬಾರಿಗೆ ಪಾಕ್ ತಂಡ ಪ್ರತಿನಿಧಿಸಿದ್ದ ಫವಾದ್ , ಕನಿಷ್ಠ ರನ್ ಖಾತೆ ತೆರೆಯಲು ವಿಫಲವಾದರು. ಕೇವಲ 4 ಎಸೆತ ಎದುರಿಸಿದ ಅಲಂ, ಕ್ರೀಸ್ ವೋಕ್ಸ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಒಂದು ದಶಕದಿಂದ ಕಾಯುತ್ತಿದ್ದ ಅವಕಾಶ ಸಿಕ್ಕ ಕೆಲಣದಲ್ಲೇ ನಿರಾಸೆ ಮೂಡುವಂತಾಯಿತು. ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟ್ಸ್ಮನ್ ಶಿವನಾರಾಯಣ್ ಚಂದ್ರಪಾಲ್ ಬ್ಯಾಟಿಂಗ್ ಶೈಲಿ ಹೊಂದಿರುವ ಫವಾದ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಗೆ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.