ಭಾರತದ ಐತಿಹಾಸಿಕ ವಿಜಯದ ಕಥೆ! '83' ಚಿತ್ರದ ಟ್ರೇಲರ್​ ಬಿಡುಗಡೆಗೆ ಕ್ಷಣಗಣನೆ

83
Published on

ನವದೆಹಲಿ: 1983ರಲ್ಲಿ ಭಾರತ ಕ್ರಿಕೆಟ್​ ತಂಡ ಸಾಧಿಸಿದ ಐತಿಹಾಸಿಕ ವರ್ಲ್ಡ್​​ ಕಪ್​ ಗೆಲುವಿನ ಸುತ್ತ ಹೆಣೆದಿರುವ ಚಿತ್ರ '83'. ಕಬೀರ್​ ಖಾನ್​ ನಿರ್ದೇಶನದ ಈ ಐಕಾನಿಕ್​ ಸಿನಿಮಾದಲ್ಲಿ ನಟ ರಣವೀರ್​ ಸಿಂಗ್​ ಭಾರತದ ಕ್ಯಾಪ್ಟನ್​ ಕಪಿಲ್​ ದೇವ್​ ಅವರ ಪಾತ್ರ ನಿರ್ವಹಿಸಿದ್ದು, ತಾಹಿರ್​ ಭಾಸಿನ್​ ಸುನೀಲ್​ ಗವಾಸ್ಕರ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡಿಸೆಂಬರ್​ 24 ರಂದು ಕನ್ನಡ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಹೊಂದಲಿರುವ ಈ ಸಿನಿಮಾದ ಟ್ರೇಲರ್​​ ಇನ್ನೆರಡು ದಿನಗಳಲ್ಲಿ ಅಂದರೆ ನ.30 ರಂದು ಹೊರಬೀಳಲಿದೆ ಎಂದು ರಣವೀರ್​ ಸಿಂಗ್ ಇಂದು ತಿಳಿಸಿದ್ದಾರೆ. ಚಿತ್ರದ ಹೊಸತೊಂದು ಆಕರ್ಷಕ ಪೋಸ್ಟರ್​ಅನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​​ ಮಾಡಿರುವ ಸಿಂಗ್​, ಅದರೊಂದಿಗೆ ಕಪಿಲ್​ ದೇವ್​​ 1983 ರಲ್ಲಿ ಹೇಳಿದ್ದ ಮಾತೊಂದನ್ನು ಹಂಚಿಕೊಂಡಿದ್ದಾರೆ.

ಈ ಪೋಸ್ಟರ್​ನಲ್ಲಿ ಕಪಿಲ್​ ದೇವ್​ ಪಾತ್ರಧಾರಿ ರಣವೀರ್​, ಇತರ ತಂಡದ ಸದಸ್ಯರೊಂದಿಗೆ ಕ್ರಿಕೆಟ್​ ಜೆರ್ಸಿ ತೊಟ್ಟು ನಗುತ್ತಾ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು. ನಿನ್ನೆಯಷ್ಟೇ ವರ್ಲ್ಡ್​​ ಕಪ್​ ಫೈನಲ್​ನಲ್ಲಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದ್ದ ಕಪಿಲ್​ ಕ್ಯಾಚ್​ನ ದೃಶ್ಯವನ್ನು ತೋರಿಸುವ ಚಿತ್ರದ ಟೀಸರ್​ ಬಿಡುಗಡೆಯಾಗಿತ್ತು. ಚಿತ್ರದ ಟ್ರೇಲರ್​ ಮತ್ತು ಖುದ್ದು ಚಿತ್ರದ ಬಿಡುಗಡೆಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್​ ಪ್ರೇಮಿಗಳು ಉತ್ಸಾಹದಿಂದ ಕಾದಿದ್ದಾರೆ.

ಚಿತ್ರದಲ್ಲಿ ನಟ ಪಂಕಜ್​ ತ್ರಿಪಾಠಿ ಟೀಂ ಮ್ಯಾನೇಜರ್​ ಆಗಿದ್ದ ಪಿ.ಆರ್.ಮಾನ್​ ಸಿಂಗ್​ ಪಾತ್ರದಲ್ಲಿ, ಸಾಖಿಬ್​ ಸಲೀಂ ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ, ಸಾಹಿಲ್ ಖತ್ತರ್​ ಸೈಯೆದ್​ ಕಿರ್ಮಾನಿ ಪಾತ್ರದಲ್ಲಿ ಮತ್ತು ಅಮ್ಮಿ ವಿರ್ಕ್​ ಬಲ್ವಿಂದರ್​ ಸಿಂಗ್​ ಸಂಧು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣವೀರ್​ ಪತ್ನಿ ನಟಿ ದೀಪಿಕಾ ಪಡುಕೋಣೆಯೇ ತೆರೆಯ ಮೇಲೆ ಕಪಿಲ್​ ದೇವ್​ ಪತ್ನಿ ರೋಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net