ಇಂದಿನಿಂದ ದ. ಆಫ್ರಿಕಾ ವಿರುದ್ಧ 2ನೇ ಟೆಸ್ಟ್​; ಹೊಸ ವರುಷ ಭಾರತಕ್ಕೆ ಗೆಲುವಿನ ಹುರುಪು

ind vs sa web
Published on

ಕೇಪ್​ಟೌನ್​: ಸೆಂಚುರಿಯನ್​ನಲ್ಲಿ ಅನುಭವಿಸಿದ ಸೋಲಿನ ಸಹಿತ 2023ರಲ್ಲಿ ಎದುರಿಸಿದ ಕಹಿಗಳನ್ನೆಲ್ಲ ಮರೆತು, 2024ರಲ್ಲಿ ಶುಭಾರಂಭ ಕಾಣಲು ಟೀಮ್​ ಇಂಡಿಯಾ ಸಜ್ಜಾಗಿದೆ. ಆತಿಥೇಯ ದ. ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯ 2ನೇ ಹಾಗೂ ಅಂತಿಮ ಪಂದ್ಯ ಬೆಟ್ಟದ ಮೇಲಿನ ರಮಣೀಯ ತಾಣವೆನಿಸಿರುವ ನ್ಯೂಲ್ಯಾಂಡ್ಸ್​ ಅಂಗಣದಲ್ಲಿ ಬುಧವಾರ ಆರಂಭಗೊಳ್ಳಲಿದ್ದು, ರೋಹಿತ್​ ಶರ್ಮ ಗೆಲುವಿನೊಂದಿಗೆ ಸರಣಿ ಸಮಬಲ ಸಾಧಿಸುವ ತವಕದಲ್ಲಿದೆ. ಈ ಬಾರಿ ಹರಿಣಗಳ ವೇಗದ ಪಡೆಗೆ ಸೆಡ್ಡುಹೊಡೆಯಬೇಕಾದ ಸವಾಲು ಭಾರತ ತಂಡದ ಮುಂದಿದ್ದು, ಹೊಸ ವರ್ಷವನ್ನು ಹೊಸ ಹುರುಪಿನೊಂದಿಗೆ ಆರಂಭಿಸಬೇಕಾಗಿದೆ.

ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಬ್ಯಾಟಿಂಗ್-ಬೌಲಿಂಗ್​ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿತ್ತು. ಮೊದಲ ಇನಿಂಗ್ಸ್​ನಲ್ಲಿ ಕೆಎಲ್​ ರಾಹುಲ್​ ಮತ್ತು 2ನೇ ಇನಿಂಗ್ಸ್​ನಲ್ಲಿ ವಿರಾಟ್​ ಕೊಹ್ಲಿ ಏಕಾಂಗಿ ಹೋರಾಟ ತೋರಿದ್ದರೆ, ಬೌಲಿಂಗ್​ನಲ್ಲಿ ಜಸ್​ಪ್ರೀತ್​ ಬುಮ್ರಾಗೆ ಇತರ ಬೌಲರ್​ಗಳಿಂದ ಸಮರ್ಥ ಬೆಂಬಲ ಸಿಗದೆ ಹಿನ್ನಡೆಯಾಗಿತ್ತು. ಕೇಪ್​ಟೌನ್​ನಲ್ಲಿ ಇದುವರೆಗೆ ಆಡಿರುವ 6 ಟೆಸ್ಟ್​ಗಳಲ್ಲಿ ಒಂದೂ ಗೆಲುವು ಕಾಣದಿರುವ ಭಾರತ ತಂಡ ಈ ಬಾರಿ ಹೊಸ ಇತಿಹಾಸ ರಚಿಸಬೇಕಾದ ಸವಾಲು ಹೊಂದಿದೆ.

ಅಗ್ರ ಕ್ರಮಾಂಕದ ಯುವ ಬ್ಯಾಟರ್​ಗಳಾದ ಯಶಸ್ವಿ ಜೈಸ್ವಾಲ್​, ಶುಭಮಾನ್​ ಗಿಲ್​ ಜತೆಗೆ ಶ್ರೇಯಸ್​ ಅಯ್ಯರ್​ ಮತ್ತು ನಾಯಕ ರೋಹಿತ್​ ಶರ್ಮ ಕೂಡ ಹರಿಣಗಳ ವೇಗದ ಬೌಲಿಂಗ್​ ವಿಭಾಗದ ಎದುರು ತತ್ತರಿಸಿದ್ದಾರೆ. ನ್ಯೂಲ್ಯಾಂಡ್ಸ್​ನಲ್ಲಾದರೂ ಭಾರತದ ಬ್ಯಾಟಿಂಗ್​ ವಿಭಾಗ ಹರಿಣಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಬೇಕಿದೆ. ರಬಾಡ ಜತೆಗೆ ನಾಂಡ್ರೆ ರ್ಬಗರ್​, ಜಾನ್ಸೆನ್​ ದಾಳಿಗೂ ಭಾರತ ಸೆಡ್ಡುಹೊಡೆಯಬೇಕಿದೆ.

ವೇಗದ ಬೌಲಿಂಗ್​ಗೆ ಸತ್ವಪರೀಕ್ಷೆ

ತವರಿನ ಏಕದಿನ ವಿಶ್ವಕಪ್​ ವೇಳೆ ಭಾರತದ ಬೌಲಿಂಗ್​ ವಿಭಾಗ ಅತ್ಯಂತ ಬಲಿಷ್ಠವಾಗಿ ಕಂಡಿತ್ತು. ಆದರೆ ಇದೀಗ ಮೊಹಮದ್​ ಶಮಿ ಅವರೊಬ್ಬರ ಗೈರಿನಲ್ಲಿ ದಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಭಾರತದ ಬೌಲಿಂಗ್​ ವಿಭಾಗ ಸತ್ವರಹಿತವಾಗಿ ಕಾಣಿಸಿತ್ತು. ಬುಮ್ರಾ ಬೆಂಬಲ ಸಿಗದೆ ಪರದಾಡಿದರೆ, ಸಿರಾಜ್​ ಪರಿಣಾಮಕಾರಿ ಎನಿಸಲಿಲ್ಲ. ಇನ್ನು ಪ್ರಸಿದ್ಧಕೃಷ್ಣ, ಶಾರ್ದೂಲ್​ ಬೌಲಿಂಗ್​ ನೀರಸವಾಗಿತ್ತು. ಹೀಗಾಗಿ ಭಾರತ ಈ ಬಾರಿ ವೇಗದ ಬೌಲಿಂಗ್​ ವಿಭಾಗದಲ್ಲಿ ಮುಕೇಶ್​ ಕುಮಾರ್​ ಮತ್ತು ಆವೇಶ್​ ಖಾನ್​ ಕಣಕ್ಕಿಳಿಸುವ ಚಿಂತನೆಯಲ್ಲಿದೆ.

ಪಿಚ್​ ರಿಪೋರ್ಟ್​

ನ್ಯೂಲ್ಯಾಂಡ್ಸ್​ ಪಿಚ್​ ಹಸಿರಾಗಿದ್ದು, ವೇಗಿಗಳಿಗೆ ಆರಂಭದಲ್ಲೇ ನೆರವು ನೀಡಲಿರುವುದರಿಂದ ಟಾಸ್​ ನಿರ್ಣಾಯಕ ಪಾತ್ರ ವಹಿಸಲಿದೆ. ಪಿಚ್​ ಬ್ಯಾಟಿಂಗ್​ಗೂ ನೆರವು ನೀಡುವ ನಿರೀೆ ಇದ್ದು, ಸ್ಪಿನ್ನರ್​ಗಳಿಗೂ ಸ್ವಲ್ಪಮಟ್ಟಿನ ನೆರವು ಲಭಿಸಬಹುದು. ಹೀಗಾಗಿ ಆರ್​. ಅಶ್ವಿನ್​ರನ್ನು 2ನೇ ಸ್ಪಿನ್ನರ್​ ಆಗಿ ತಂಡದಲ್ಲಿ ಉಳಿಸಿಕೊಳ್ಳಲು ಭಾರತ ಚಿಂತನೆ ನಡೆಸಿದೆ. ಸೆಂಚುರಿಯನ್​ನಂತೆ ಇಲ್ಲಿ ಮಳೆ ಭೀತಿ ಇರುವುದಿಲ್ಲ.

ಟೀಮ್​ ನ್ಯೂಸ್​:

ಭಾರತ: ಬೆನ್ನುನೋವಿನಿಂದಾಗಿ ಮೊದಲ ಟೆಸ್ಟ್​ ತಪ್ಪಿಸಿಕೊಂಡಿದ್ದ ಆಲ್ರೌಂಡರ್​ ರವೀಂದ್ರ ಜಡೇಜಾ 2ನೇ ಟೆಸ್ಟ್​ಗೆ ಮರಳುವುದು ಖಚಿತವೆನಿಸಿದೆ. ಅವರಿಗೆ ಆರ್​. ಅಶ್ವಿನ್​ ಅಥವಾ ವೇಗಿ ಶಾರ್ದೂಲ್​ ಠಾಕೂರ್​ ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ಇನ್ನು ಪದಾರ್ಪಣೆ ಟೆಸ್ಟ್​ನಲ್ಲಿ ನಿರಾಸೆ ಮೂಡಿಸಿದ ಕನ್ನಡಿಗ ಪ್ರಸಿದ್ಧ ಕೃಷ್ಣ ಬದಲಿಗೆ ಚೆಂಡನ್ನು ಎರಡೂ ಕಡೆ ಸ್ವಿಂಗ್​ ಮಾಡಬಲ್ಲ ಮುಕೇಶ್​ ಕುಮಾರ್​ ಆಡುವುದು ಬಹುತೇಕ ಖಚಿತವೆನಿಸಿದೆ.

ದ. ಆಫ್ರಿಕಾ: ಗಾಯಾಳು ವೇಗಿ ಗೆರಾಲ್ಡ್​ ಕೋಟ್​ಜೀ 2ನೇ ಟೆಸ್ಟ್​ನಿಂದ ಹೊರಗುಳಿಯಲಿದ್ದು, ಫಿಟ್ನೆಸ್​ ಸಮಸ್ಯೆಯಿಂದ ಮೊದಲ ಟೆಸ್ಟ್​ ತಪ್ಪಿಸಿಕೊಂಡಿದ್ದ ವೇಗಿ ಲುಂಗಿ ಎನ್​ಗಿಡಿ ಮರಳಬಹುದು. ಎನ್​ಗಿಡಿ ಫಿಟ್​ ಆಗದಿದ್ದರೆ ಸ್ಪಿನ್ನರ್​ ಕೇಶವ್​ ಮಹಾರಾಜ್​, ಕೋಟ್​ಜೀ ಸ್ಥಾನವನ್ನು ತುಂಬಬಹುದು. ಟೆಂಬಾ ಬವುಮಾ ಸ್ಥಾನದಲ್ಲಿ ಜುಬೇರ್​ ಹಂಜಾ ಆಡಲಿದ್ದಾರೆ. 28 ವರ್ಷದ ಹಂಜಾ ಇದುವರೆಗೆ 6 ಟೆಸ್ಟ್​ ಆಡಿದ್ದು, 62 ರನ್​ ಗರಿಷ್ಠ ಗಳಿಕೆಯಾಗಿದೆ.

ಆರಂಭ: ಮಧ್ಯಾಹ್ನ 1.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

*ಕೇಪ್​ಟೌನ್​ನಲ್ಲಿ ಮುಖಾಮುಖಿ: 6

ಭಾರತ: 0

ದ. ಆಫ್ರಿಕಾ: 4

ಡ್ರಾ: 2

*ಕೇಪ್​ಟೌನ್​ನಲ್ಲಿ ದ. ಆಫ್ರಿಕಾ: 59

ಗೆಲುವು: 27

ಸೋಲು: 21

ಡ್ರಾ: 11

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net