

ಟೊರಾಂಟೊ: ಭಾರತದ ಯುವ ಗ್ರಾಂಡ್ ಮಾಸ್ಟರ್ ದೊಮ್ಮರಾಜು ಗುಕೇಶ್ ಹಾಲಿ ವಿಶ್ವ ಚೆಸ್ ಚಾಂಪಿಯನ್ಗೆ ಸವಾಲೊಡ್ಡುವ ಅವಕಾಶದ ಐತಿಹಾಸಿಕ ಸಾಧನೆಯ ಸನಿಹಕ್ಕೇರಿದ್ದಾರೆ. ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ 13ನೇ ಸುತ್ತಿನಲ್ಲಿ ಫ್ರಾನ್ಸ್ನ ಫಿರೌಜಾ ಅಲಿರೆಜಾ ವಿರುದ್ಧ ಅಮೋ ಗೆಲುವು ದಾಖಲಿಸಿದ 17 ವರ್ಷದ ಡಿ. ಗುಕೇಶ್ ಅಂಕಪಟ್ಟಿಯಲ್ಲಿ ಏಕಾಂಗಿಯಾಗಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್ ಪಟ್ಟದ ಅಭ್ಯರ್ಥಿಯಾಗುವ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಸಂಪಾದಿಸುವತ್ತ ಮುನ್ನಡೆದಿದ್ದಾರೆ.
ಚೆನ್ನೆ$ನ ಗುಕೇಶ್ 14ನೇ ಹಾಗೂ ಕೊನೇ ಸುತ್ತಿನಲ್ಲೂ ಗೆಲುವು ದಾಖಲಿಸಿದರೆ, ಕ್ಯಾಂಡಿಡೇಟ್ಸ್ ಟೂರ್ನಿಯ ಪ್ರಶಸ್ತಿ ಗೆಲುವಿನೊಂದಿಗೆ ವರ್ಷಾಂತ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ಗೆ ಸವಾಲೊಡ್ಡುವ ಅವಕಾಶ ಪಡೆಯಲಿದ್ದಾರೆ. ಗುಕೇಶ್ಗೆ ಹಿಕಾರು ನಕಮುರಾ ಕೊನೇ ಎದುರಾಳಿಯಾಗಿದ್ದಾರೆ.
ಗುಕೇಶ್ 8.5 ಅಂಕ ಹೊಂದಿದ್ದರೆ, ರಷ್ಯಾದ ಇಯಾನ್ ನೆಪೊಮ್ನಿಯಾಚಿ, ಅಮೆರಿಕದ ಹಿಕಾರು ನಕಮುರಾ ಮತ್ತು ಫ್ಯಾಬಿಯಾನೊ ಕರುವಾನ ತಲಾ 8 ಅಂಕಗಳೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಸದ್ಯ ಈ ನಾಲ್ವರು ಪ್ರಶಸ್ತಿ ರೇಸ್ನಲ್ಲಿದ್ದರೂ, ಗುಕೇಶ್ ಕೊನೇ ಸುತ್ತಿನಲ್ಲೂ ಗೆದ್ದರೆ ಯಾವುದೇ ಲೆಕ್ಕಾಚಾರವಿಲ್ಲದೆ ವಿಶ್ವ ಚಾಂಪಿಯನ್ಷಿಪ್ ಪಂದ್ಯಕ್ಕೆ ಅರ್ಹತೆ ಪಡೆಯಲಿದ್ದಾರೆ. ಗುಕೇಶ್ ಡ್ರಾಗೆ ತೃಪ್ತಿಪಟ್ಟರೂ, ಕರುವಾನ-ನೆಪೊಮ್ನಿಯಾಚಿ ನಡುವಿನ ಇನ್ನೊಂದು ಪಂದ್ಯ ಡ್ರಾಗೊಂಡರೆ ಟೈಬ್ರೇಕ್ ಅಗತ್ಯವಿಲ್ಲದೆ ಕ್ಯಾಂಡಿಡೇಟ್ಸ್ ಟೂರ್ನಿಯ ಪ್ರಶಸ್ತಿ ಗೆಲ್ಲಲಿದ್ದಾರೆ.
ಸ್ಪರ್ಧೆಯಲ್ಲಿರುವ ಇನ್ನಿಬ್ಬರು ಭಾರತೀಯರಾದ ಆರ್. ಪ್ರಜ್ಞಾನಂದ (6ಅಂಕ) ಮತ್ತು ವಿದಿತ್ ಗುಜರಾತಿ (5.5) ಕ್ರಮವಾಗಿ 5 ಮತ್ತು 6ನೇ ಸ್ಥಾನದಲ್ಲಿದ್ದಾರೆ. ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿರುವ ಇವರಲ್ಲಿ 13ನೇ ಸುತ್ತಿನಲ್ಲಿ ಪ್ರಜ್ಞಾನಂದ ಸೋತರೆ, ವಿದಿತ್ ಡ್ರಾಕ್ಕೆ ತೃಪ್ತಿಪಟ್ಟರು.
ವೈಶಾಲಿಗೆ ಸತತ 4ನೇ ಜಯ
ಮಹಿಳೆಯರ ವಿಭಾಗದಲ್ಲಿ ಆರ್. ವೈಶಾಲಿ ಸತತ 4ನೇ ಜಯದೊಂದಿಗೆ ಬೀಗಿದರು. ಇದರೊಂದಿಗೆ ವೈಶಾಲಿ 6.5 ಅಂಕಗಳೊಂದಿಗೆ ಜಂಟಿ 3ನೇ ಸ್ಥಾನಕ್ಕೇರಿದ್ದಾರೆ. 13ನೇ ಸುತ್ತಿನಲ್ಲಿ ಡ್ರಾಕ್ಕೆ ತೃಪ್ತಿಪಟ್ಟ ಕೊನೆರು ಹಂಪಿ ಕೂಡ 6.5 ಅಂಕ ಹೊಂದಿದ್ದಾರೆ. ಇವರಿಬ್ಬರು ಈಗಾಗಲೆ ಪ್ರಶಸ್ತಿ ರೇಸ್ನಿಂದ ಹೊರಬಿದ್ದಿದ್ದರೆ, ಚೀನಾದ ಟಾನ್ ಜೊಂಗ್ಯಿ 8.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಚೀನಾದ ಮತ್ತೋರ್ವ ಆಟಗಾರ್ತಿ ಲೀ ಟಿಂಗ್ಜೀ 7.5 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ಜೊಂಗ್ಯಿಗೆ ಪ್ರಶಸ್ತಿ ಬಹುತೇಕ ಖಚಿತವೆನಿಸಿದೆ.