IPL​ಗೆ ನನ್ನ ಗರ್ಲ್​ಫ್ರೆಂಡ್​ ಕರೆತರಬಹುದೇ? ಸ್ಟಾರ್​ ಆಟಗಾರನ ಬೇಡಿಕೆ ಕೇಳಿ ಗಂಭೀರ್​ಗೆ​ ಶಾಕ್​ ಆಗಿತ್ತಂತೆ!

Gautam Gambhir
Published on

ನವದೆಹಲಿ: ಸಾಮಾನ್ಯವಾಗಿ ಕ್ರಿಕೆಟಿಗರು ಅಂತಾರಾಷ್ಟ್ರೀಯ ಪ್ರವಾಸಗಳ ಸಂದರ್ಭದಲ್ಲಿ ಬೇರೆ ಬೇರೆ ದೇಶಗಳಿಗೆ ಹೋಗುತ್ತಾರೆ. ಇದರಿಂದಾಗಿ ತಮ್ಮ ಕುಟುಂಬದಿಂದ ದೂರ ಇರಬೇಕಾಗುತ್ತದೆ. ಆದರೆ, ಕೆಲವು ಕ್ರಿಕೆಟಿಗರು ತಮ್ಮ ಕುಟುಂಬ ಅಥವಾ ಪ್ರೇಯಸಿಯನ್ನು ತಮ್ಮೊಂದಿಗೆ ಕರೆದೊಯ್ಯುವ ಧೈರ್ಯ ಮಾಡುತ್ತಾರೆ. ಆದರೆ, ಕರೆತರಲು ಅನುಮತಿ ಪಡೆದುಕೊಳ್ಳಬೇಕು. ಹೀಗಾಗಿ ಕೋಚ್‌ ಅಥವಾ ತಂಡದ ಮ್ಯಾನೇಜ್​ಮೆಂಟ್ ಬಳಿ ಅನುಮತಿ ಕೋರುತ್ತಾರೆ.​ ಅದೇ ರೀತಿ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್) ಸ್ಟಾರ್ ಆಟಗಾರನೊಬ್ಬ ತನ್ನ ಗೆಳತಿಯನ್ನು ಐಪಿಎಲ್‌ಗೆ ಕರೆದುಕೊಂಡು ಬರಬಹುದೇ? ಎಂದು ಕೇಳಿದ್ದರು ಎಂಬ ಇಂಟೆರೆಸ್ಟಿಂಗ್​ ಸಂಗತಿಯನ್ನು ಕೆಕೆಆರ್ ಮೆಂಟರ್ ಗೌತಮ್ ಗಂಭೀರ್ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಗಂಭೀರ್ ಅವರ ಅನುಮತಿ ಕೇಳಿದ ಆ ಸ್ಟಾರ್​ ಆಟಗಾರ ಯಾರು? ಎಂಬುದನ್ನು ನಾವೀಗ ತಿಳಿಯೋಣ.

ಗೌತಮ್ ಗಂಭೀರ್ ಅವರು ಕೋಲ್ಕತ್ತ ನೈಟ್ ರೈಡರ್ಸ್‌ ತಂಡಕ್ಕೆ ಮೂರನೇ ಐಪಿಎಲ್ ಪ್ರಶಸ್ತಿಯನ್ನು ಗೆದ್ದು ಕೊಟ್ಟಿದ್ದಾರೆ. 2012 ಮತ್ತು 2014ರಲ್ಲಿ ತಂಡದ ನಾಯಕನಾಗಿ ಟ್ರೋಫಿ ಜಯಿಸಿದರೆ, ಇತ್ತೀಚೆಗಷ್ಟೇ ಮುಕ್ತಾಯವಾದ 17ನೇ ಸೀಸನ್​ನಲ್ಲಿ ತಂಡದ ಮೆಂಟರ್​ ಆಗಿ ತಮ್ಮ ದೃಢ ನಿರ್ಧಾರಗಳಿಂದಲೇ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಯಾವ ಆಟಗಾರನನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗಂಭೀರ್​ ಅವರಿಗೆ ಗೊತ್ತಿದೆ.

ಅಂದಹಾಗೆ ಗಂಭೀರ್​ ಅವರು ಇತ್ತೀಚೆಗಷ್ಟೇ ಕೆಕೆಆರ್ ಸ್ಟಾರ್ ಆಟಗಾರ ಸುನಿಲ್ ನಾರಾಯಣ್​ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮೊಟ್ಟಮೊದಲ ಬಾರಿಗೆ ನಾರಾಯಣ್​ ಅವರನ್ನು ಭೇಟಿಯಾದಾಗ, ಇಬ್ಬರ ನಡುವೆ ನಡೆದ ಕುತೂಹಲಕಾರಿ ಸಂಭಾಷಣೆಯನ್ನು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸುನಿಲ್ ನಾರಾಯಣ್​ ಬಗ್ಗೆ ಗೌತಮ್ ಗಂಭೀರ್ ಹೇಳಿದ್ದೇನೆಂದರೆ, 2012ರಲ್ಲಿ ನಾರಾಯಣ್​ ಐಪಿಎಲ್ ಪ್ರವೇಶಿಸಿದ ದಿನಗಳು ಇನ್ನೂ ನೆನಪಿನಲ್ಲಿದೆ. ನಾನು ಮತ್ತು ನಾರಾಯಣ್​ ಇಬ್ಬರದು ಒಂದೇ ರೀತಿಯ ಮನಸ್ಥಿತಿ. ನಾವಿಬ್ಬರು ನಮ್ಮ ಭಾವನೆಗಳನ್ನು ಸಾರ್ವಜನಿಕವಾಗಿ ಹೆಚ್ಚು ವ್ಯಕ್ತಪಡಿಸುವುದಿಲ್ಲ ಎಂದು ಗಂಭೀರ್ ಹೇಳಿದ್ದಾರೆ. ನಾರಾಯಣ್​ ಮೊದಲು ತಂಡಕ್ಕೆ ಬಂದಾಗ ಅವರನ್ನು ಊಟಕ್ಕೆ ಆಹ್ವಾನಿಸಿದ್ದೆ. ಆದರೆ, ಅವರು ತುಂಬಾ ನಾಚಿಕೆಪಡುತ್ತಿದ್ದರು ಮತ್ತು ಇಡೀ ಊಟದ ಸಮಯದಲ್ಲಿ ಒಂದೇ ಒಂದು ಮಾತನ್ನೂ ಆಡಲಿಲ್ಲ ಎಂದು ಗಂಭೀರ್​ ಹೇಳಿದರು.

Sunil Narian

ಈ ಸಂದರ್ಭದಲ್ಲಿ ಅಂತಿಮವಾಗಿ ಗಂಭೀರ್‌ಗೆ ಎದುರಾದ ಮೊದಲ ಪ್ರಶ್ನೆ ಎಂದರೆ, ನಾನು ನನ್ನ ಗರ್ಲ್​ಫ್ರೆಂಡ್​ ಅನ್ನು ಐಪಿಎಲ್​ಗೆ ಕರೆತರಬಹುದೇ? ಎಂಬುದು. ನಾರಾಯಣ್ ಪ್ರಶ್ನಿಸಿದ್ದನ್ನು ಕೇಳಿ ಒಂದು ಕ್ಷಣ ಶಾಕ್ ಆದೆ. ಈವರೆಗೂ ಈ ವಿಚಾರ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.​

ಅಂದಹಾಗೆ ಸುನಿಲ್ ನಾರಾಯಣ್​ ಅವರನ್ನು ಪರಿಪೂರ್ಣ ಬ್ಯಾಟ್ಸ್‌ಮನ್ ಮಾಡಿದ ಕೀರ್ತಿ ಗಂಭೀರ್ ಅವರಿಗೆ ಸಲ್ಲುತ್ತದೆ. ಓಪನರ್ ಆಗಿ ಕಳುಹಿಸುವ ಮೂಲಕ ಅಮೋಘ ಯಶಸ್ಸನ್ನು ಸಾಧಿಸಿದರು. ಕೆಕೆಆರ್‌ನ ಐಪಿಎಲ್ ಪ್ರಶಸ್ತಿ ಗೆಲುವಿನಲ್ಲಿ ನಾರಾಯಣ್​ ಪ್ರಮುಖ ಪಾತ್ರ ವಹಿಸಿದ್ದರು. ನಾರಾಯಣ್​ ಅವರು ಬ್ಯಾಟ್ ಮತ್ತು ಬಾಲ್‌ನಿಂದ ಮಿಂಚಿದರು. ಅಲ್ಲದೆ, ತಮ್ಮದೇ ಆದ ವಿಶೇಷ ಮನ್ನಣೆ ಪಡೆದರು. ಇತ್ತ ಗಂಭೀರ್ ನಾರಾಯಣ್​ ಅವರನ್ನು ಓಪನರ್ ಆಗಿ ಕಳುಹಿಸಿ ಗೆದ್ದರು. ಇನ್ನು ನಮ್ಮಿಬ್ಬರ ನಡುವಿನ ಬಾಂಧವ್ಯ ಈಗಲೂ ಹಾಗೆಯೇ ಇದೆ ಎಂದು ಗಂಭೀರ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net