

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ ಟೀಮ್ ಇಂಡಿಯಾ ವೇಗಿ, ವಿಶ್ವದ ಬೆಸ್ಟ್ ಬೌಲರ್ ಜಸ್ಪ್ರಿತ್ ಬುಮ್ರಾ (Jasprit Bumrah ) ಸದ್ಯ ಟೂರ್ನಿ ಮುಕ್ತಾಯಗೊಂಡ ನಂತರ ದೀರ್ಘ ವಿಶ್ರಾಂತಿಯಲ್ಲಿದ್ದರು. ಇತ್ತೀಚೆಗೆ ನಡೆದ ಯಾವುದೇ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಳ್ಳದ ಬುಮ್ರಾ, ಸದ್ಯ ತಮ್ಮ ಅನುಪಸ್ಥಿತಿಯಲ್ಲಿಯೂ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವುದು ವಿಶೇಷ. ಇದಕ್ಕೆ ಕಾರಣ ಮುಂಬರುವ 2025ರ ಐಪಿಎಲ್ (IPL 2025). ಒಂದೆಡೆ ರೋಹಿತ್ರನ್ನು ಹರಾಜು ಪ್ರಕ್ರಿಯೆಯಲ್ಲಿ ತಂಡದಿಂದ ಕೈಬಿಡಲು ತುದಿಗಾಲಿನಲ್ಲಿರುವ ಎಂಐ ಫ್ರಾಂಚೈಸಿ, ರಿಟೆನ್ಷನ್ನಲ್ಲಿ ಉಳಿಸಿಕೊಳ್ಳಬೇಕಾದ ಮೊದಲ ಆಟಗಾರನ ಸ್ಥಾನದಲ್ಲಿ ಜಸ್ಪ್ರಿತ್ ಹೆಸರನ್ನು ಇರಿಸಿಕೊಂಡಿದೆ. ಈ ಮಧ್ಯೆ ಮಾಜಿ ಆಟಗಾರ ಹರ್ಭಜನ್ ಸಿಂಗ್, ಆಕ್ಷನ್ನಲ್ಲಿ ಬುಮ್ರಾಗೆ ಬಿಡ್ ಆಗುವ ಹಣ ಎಷ್ಟು ಕೋಟಿ ರೂ. ಎಂಬುದನ್ನು ಇದೀಗ ಊಹಿಸಿ, ಹೇಳಿದ್ದಾರೆ.
ಮುಂಬರುವ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರಲಿದ್ದು, ಈ ಬಾರಿ ಆಯಾ ಫ್ರಾಂಚೈಸಿಗಳು ಹಾಕಿಕೊಂಡಿರುವ ಲೆಕ್ಕಾಚಾರಗಳು ತಲೆಕೆಳಗಾಗಲಿದೆಯೋ ಅಥವಾ ಅಂದುಕೊಂಡಂತೆ ಈಡೇರಲಿದೆಯೋ ಎಂಬುದನ್ನು ಸದ್ಯ ಕುತೂಹಲದಿಂದ ಕಾದು ನೋಡಬೇಕಿದೆ. ಆಕ್ಷನ್ಗೆ ದಿನಗಣನೆ ಶುರುವಾದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ತಂಡದಿಂದ ಕೈಬಿಡಲು ಫ್ರಾಂಚೈಸಿ ಎದುರುನೋಡುತ್ತಿದೆ. ಇದೇ ಸಮಯದಲ್ಲಿ ರೋಹಿತ್ ಕೂಡ ಎಂಐ ತಂಡದಲ್ಲಿ ಉಳಿದುಕೊಳ್ಳುವ ಆಸಕ್ತಿ ಹೊಂದಿಲ್ಲ ಎಂಬುದು ಕೆಲ ವರದಿಗಳ ಮೂಲಕ ಸ್ಪಷ್ಟವಾಗಿದೆ. ಒಂದೆಡೆ ಹಿಟ್ಮ್ಯಾನ್ ಆರ್ಸಿಬಿ ಪಾಲಾಗುತ್ತಾರೆ ಎಂದು ಒಂದಷ್ಟು ವರದಿಗಳು ಸೂಚಿಸಿದರೆ, ಇನ್ನೂ ಕೆಲವು ಶರ್ಮ ಲಖನೌ ಸೂಪರ್ ಜೈಂಟ್ಸ್ ಸೇರಲಿದ್ದಾರೆ ಎಂದು ತಿಳಿಸಿವೆ. ಇದೆಲ್ಲದರ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹರ್ಭಜನ್ ಸಿಂಗ್ ಮಾತನಾಡಿ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮ್ಯಾಚ್-ವಿನ್ನರ್ ಆಗಿ ಗುರುತಿಸಿಕೊಂಡಿರುವ ಬುಮ್ರಾಗೆ ಬಹಳ ದೊಡ್ಡ ಮಟ್ಟದ ಬಿಡ್ ನಡೆಯಲಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಜಸ್ಪ್ರಿತ್ ಬುಮ್ರಾರನ್ನು ಹರಾಜಿನಲ್ಲಿ ಕೂಗಿದರೆ, ಐಪಿಎಲ್ ಇತಿಹಾಸದಲ್ಲಿ ನಾವೇ ಅತಿ ಹೆಚ್ಚು ಸಂಭಾವನೆ ಪಡೆಯುವ ಐಪಿಎಲ್ ಆಟಗಾರರಾಗಿ ಹೊರಹೊಮ್ಮುತ್ತೇವೆ ಅಲ್ಲವೇ? ಇದಕ್ಕೆ ನೀವೇನು ಹೇಳ್ತೀರಾ? ಎಂದು ಟ್ವೀಟ್ನಲ್ಲಿ ಬರೆದುಕೊಂಡಿರುವ ಹರ್ಭಜನ್ ಸಿಂಗ್, “ಈ ಸಂಭಾಷಣೆಯನ್ನು ನಾನೇ ಮುಂದುವರಿಸಲು ಇಚ್ಛಿಸಿ ಹೇಳುವುದಾದರೆ, ಮುಂಬೈ ಇಂಡಿಯನ್ಸ್ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ವರ್ಷಕ್ಕೆ 30ರಿಂದ35 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಸುಲಭವಾಗಿ ಪಡೆಯುತ್ತಾರೆ. ಐಪಿಎಲ್ನ ಎಲ್ಲಾ 10 ತಂಡಗಳು ಅವರಿಗಾಗಿ ಹರಾಜು ಪ್ರಕ್ರಿಯೆಯಲ್ಲಿ ದೊಡ್ಡ ಸೆಣಸಾಟವನ್ನೇ ನಡೆಸುವುದು ಖಚಿತ" ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ 'ಬಜ್ಜಿ' ಮಾಡಿರುವ ಈ ಟ್ವೀಟ್ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).