ನಡುರಸ್ತೆಯಲ್ಲೇ ಹತ್ಯೆಯಾದ ಮಾಜಿ ಕ್ರಿಕೆಟಿಗನ ಸಹೋದರ..!

philander.jpg brother murder for web
Published on

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ತಂಡದ ಮಾಜಿ ಕ್ರಿಕೆಟಿಗ ವೆರ್ಲಾನ್ ಫಿಲಾಂಡರ್ ಸಹೋದರ ಬುಧವಾರ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದಾರೆ. ವೆರ್ಲಾನ್ ಫಿಲಾಂಡರ್ ಅವರ ಕಿರಿಯ ಸಹೋದರ ಟೈರೊನ್ ಫಿಲಾಂಡರ್ ಅವರನ್ನು ತಮ್ಮ ಮನೆಯ ಸಮೀಪದಲ್ಲೇ ನೀರು ಪೂರೈಸುತ್ತಿದ್ದ ವೇಳೆ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ವೆರ್ಲಾನ್, ನನ್ನ ಸಹೋದರನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಕುರಿತು ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ. ಕೊಲೆ ಸುತ್ತ ಹರಡುವ ಊಹಾಪೋಹಗಳು ಕುಟುಂಬವನ್ನು ಸಂಕಷ್ಟಕ್ಕೆ ದೂಡಲಿದೆ ಎಂದಿದ್ದಾರೆ.

ಪ್ರಕರಣದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬುಧವಾರ ಭೋಜನ ವಿರಾಮದ ವೇಳೆಗೆ ಈ ಘಟನೆ ನಡೆದಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಶೂಟೌಟ್ ವೇಳೆ ಫಿಲಾಂಡರ್ ತಾಯಿ ಹಾಗೂ ಕುಟುಂಬದ ಇತರ ಸದಸ್ಯರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಘಟನೆ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

35 ವರ್ಷದ ವೆರ್ಲಾನ್ ಫಿಲಾಂಡರ್, ಇದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 13 ವರ್ಷಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು. ವಿಶ್ವ ಶ್ರೇಷ್ಠ ವೇಗದ ಬೌಲರ್ ಆಗಿಯೂ ಗುರುತಿಸಿಕೊಂಡಿದ್ದರು. ರಾಷ್ಟ್ರೀಯ ತಂಡದ ಪರ 64 ಟೆಸ್ಟ್,30 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 224 ವಿಕೆಟ್ ಕಬಳಿಸಿದ್ದರು. ಇಂಗ್ಲೀಷ್ ಕೌಂಟಿ ಸೊಮರ್‌ಸೆಟ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕೋವಿಡ್-19 ರಿಂದಾಗಿ ಒಪ್ಪಂದ ರದ್ದು ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net