

ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮ ವರ್ಷಾಂತ್ಯದ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳ ಪೈಕಿ ಒಂದು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಒಂದು ಪಂದ್ಯಕ್ಕೆ ಗೈರಾಗುವುದಾಗಿ ರೋಹಿತ್ ಈಗಾಗಲೆ ಬಿಸಿಸಿಐ ಜತೆಗೆ ಸಂವಹನ ನಡೆಸಿ ಒಪ್ಪಿಗೆ ಪಡೆದಿದ್ದಾರೆ ಎನ್ನಲಾಗಿದೆ.
ರೋಹಿತ್ ಪತ್ನಿ ರಿತಿಕಾ ಆ ಸಮಯದಲ್ಲಿ ಎರಡನೇ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇರುವುದರಿಂದ ತವರಿಗೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆಸೀಸ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ನವೆಂಬರ್ 22ರಂದು ಶುರುವಾಗಲಿದ್ದು, ಮೊದಲ ಪಂದ್ಯ ಪರ್ತ್ನಲ್ಲಿ ನಡೆಯಲಿದೆ. 2ನೇ ಟೆಸ್ಟ್ ಡಿಸೆಂಬರ್ 6ರಿಂದ 10ರವರೆಗೆ ಅಡಿಲೇಡ್ನಲ್ಲಿ ನಿಗದಿಯಾಗಿದೆ.
37 ವರ್ಷದ ರೋಹಿತ್ ಶರ್ಮ ಅವರ ಪತ್ನಿ ರಿತಿಕಾ ಒಂದು ವೇಳೆ ಆಸ್ಟ್ರೆಲಿಯಾ ಪ್ರವಾಸಕ್ಕೆ ಮೊದಲೇ ಮಗುವಿಗೆ ಜನ್ಮ ನೀಡಿದರೆ ಎಲ್ಲ 5 ಟೆಸ್ಟ್ ಪಂದ್ಯಗಳಲ್ಲೂ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆಸ್ಟ್ರೆಲಿಯಾ ಪ್ರವಾಸಕ್ಕೆ ಮುನ್ನ ಭಾರತ ತಂಡ ತವರಿನಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನವೆಂಬರ್ 5ರವರೆಗೆ ಟೆಸ್ಟ್ ಸರಣಿ ಆಡಲಿದೆ.
ಆಸ್ಟ್ರೆಲಿಯಾದಲ್ಲಿ ರೋಹಿತ್ ಶರ್ಮ ಟೆಸ್ಟ್ ಪಂದ್ಯ ತಪ್ಪಿಸಿಕೊಂಡರೆ ಅವರ ಬದಲಿಗೆ ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಶುಭಮಾನ್ ಗಿಲ್ ಅಥವಾ ಕೆಎಲ್ ರಾಹುಲ್ ಕೂಡ ಬದಲಿ ಆರಂಭಿಕರಾಗುವ ರೇಸ್ನಲ್ಲಿದ್ದಾರೆ ಎನ್ನಲಾಗಿದೆ.
ಭಾರತ ತಂಡ ಇತ್ತೀಚೆಗೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಉಪನಾಯಕನನ್ನು ಹೆಸರಿಸಿರಲಿಲ್ಲ. ಹೀಗಾಗಿ ರೋಹಿತ್ ಗೈರಾದಾಗ ಟೆಸ್ಟ್ ತಂಡದ ಹಂಗಾಮಿ ನಾಯಕತ್ವ ಯಾರ ಪಾಲಾಗಲಿದೆ ಎಂಬ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ. ಸದ್ಯಕ್ಕೆ ಈ ನಿಟ್ಟಿನಲ್ಲಿ ಸೀಮಿತ ಓವರ್ ತಂಡದ ಉಪನಾಯಕ ಶುಭಮಾನ್ ಗಿಲ್, ವೇಗಿ ಜಸ್ಪ್ರೀತ್ ಬುಮ್ರಾ ಮತ್ತು ವಿಕೆಟ್ ಕೀಪರ್ ರಿಷಭ್ ಪಂತ್ ರೇಸ್ನಲ್ಲಿದ್ದಾರೆ.