

ನವದೆಹಲಿ: ಮುನ್ನಾಬಾಯಿ ಎಂಬಿಬಿಎಸ್, 3 ಈಡಿಯಟ್ಸ್ನಂಥ ಜನಪ್ರಿಯ ಬಾಲಿವುಡ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಿಧುವಿನೋದ್ ಚೋಪ್ರಾ ಮತ್ತು ಖ್ಯಾತ ಸಿನಿಮಾ ಪತ್ರಕರ್ತೆ ಅನುಪಮಾ ಚೋಪ್ರಾ ದಂಪತಿಯ ಪುತ್ರನಾಗಿರುವ ಅಗ್ನಿ ಚೋಪ್ರಾ ರಣಜಿ ಟ್ರೋಫಿ ಪ್ಲೇಟ್ ಲೀಗ್ನಲ್ಲಿ ಮಿಜೋರಾಂ ಪರ ರನ್ಪ್ರವಾಹ ಹರಿಸಿದ್ದಾರೆ.
25 ವರ್ಷದ ಎಡಗೈ ಬ್ಯಾಟರ್ ಅಗ್ನಿ ಚೋಪ್ರಾ ಇದುವರೆಗೆ ಆಡಿದ 3 ಪಂದ್ಯಗಳಲ್ಲಿ ಬರೋಬ್ಬರಿ 646 ರನ್ ಸಿಡಿಸಿದ್ದಾರೆ. ಇದರಲ್ಲಿ 2 ದ್ವಿಶತಕ ಸಹಿತ 3 ಶತಕಗಳು ಸೇರಿವೆ. ಸಿಕ್ಕಿಂ ವಿರುದ್ಧದ ಮೊದಲ ಪಂದ್ಯದಲ್ಲಿ 51, 29 ರನ್ ಮಾತ್ರ ಗಳಿಸಿದ್ದ ಅಗ್ನಿ, 2ನೇ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ 110 ಮತ್ತು ಅಜೇಯ 238 ರನ್ ಸಿಡಿಸಿದ್ದರು. ಮಣಿಪುರ ವಿರುದ್ಧ ನಡೆಯುತ್ತಿರುವ 3ನೇ ಪಂದ್ಯದಲ್ಲಿ 269 ಎಸೆತಗಳಲ್ಲಿ 29 ಬೌಂಡರಿ, 1 ಸಿಕ್ಸರ್ ಸಹಿತ 218 ರನ್ ಸಿಡಿಸಿದ್ದಾರೆ.
ಇದುವರೆಗೆ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅಗ್ನಿ ಚೋಪ್ರಾ, 99ರ ಸರಾಸರಿಯಲ್ಲಿ 1,500ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರಲ್ಲಿ 8 ಶತಕ, 4 ಅರ್ಧಶತಕಗಳು ಸೇರಿವೆ. ಅಗ್ನಿ ಚೋಪ್ರಾ ಕಳೆದ ರಣಜಿ ಆವೃತ್ತಿಯಲ್ಲಿ ಆಡಿದ ಮೊದಲ ನಾಲ್ಕು ಪಂದ್ಯಗಳಲ್ಲೂ ಶತಕ ಸಿಡಿಸಿ ವಿಶೇಷ ದಾಖಲೆ ಬರೆದಿದ್ದರು.