ಏಕದಿನ ವಿಶ್ವಕಪ್​ ಆರಂಭೋತ್ಸವಕ್ಕೆ ಬಾಲಿವುಡ್​ ಮೆರುಗು

wc bollywood web
Published on

ಅಹಮದಾಬಾದ್​: ಏಕದಿನ ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಪಂದ್ಯಕ್ಕೆ ಮುನ್ನಾದಿನವಾದ ಅಕ್ಟೋಬರ್​ 4ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಆರಂಭೋತ್ಸವ ನಡೆಯಲಿದ್ದು, ಇದರಲ್ಲಿ ಬಾಲಿವುಡ್​ ತಾರೆಯರು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಸಂಜೆ 7 ಗಂಟೆಯಿಂದ ನಡೆಯಲಿರುವ ಅದ್ದೂರಿ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಗಾಯಕಿ ಆಶಾ ಬೋಸ್ಲೆ, ಶ್ರೇಯಾ ಘೋಷಾಲ್​, ಶಂಕರ್​ ಮಹಾದೇವನ್​ ಮತ್ತು ಅರ್ಜಿತ್​ ಸಿಂಗ್​ ಗಾನವೈಭವ ಇರಲಿದೆ. ಜತೆಗೆ, ವಿಶ್ವಕಪ್​ ಧ್ಯೇಯಗೀತೆಯಲ್ಲಿ ಕಾಣಿಸಿಕೊಂಡಿರುವ ನಟ ರಣವೀರ್​ ಸಿಂಗ್​ ಮತ್ತು ತಮನ್ನಾ ಭಾಟಿಯಾ ಹಲವು ಕಲಾವಿದರ ತಂಡದೊಂದಿಗೆ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇನ್ನೂ ಕೆಲ ಬಾಲಿವುಡ್​ ತಾರೆಯರು ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ.

ಆರಂಭೋತ್ಸವದಲ್ಲಿ ಲೇಸರ್​ ಶೋ ಮತ್ತು ಸುಡುಮದ್ದುಗಳ ವಿಶೇಷ ಪ್ರದರ್ಶನವೂ ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯ ಪ್ರದರ್ಶನವೂ ನಡೆಯುವ ನಿರೀಕ್ಷೆ ಇದೆ. ಆತಿಥೇಯ ಭಾರತ ತಂಡದ ನಾಯಕ ರೋಹಿತ್​ ಶರ್ಮ ಸಹಿತ ಟೂರ್ನಿಯಲ್ಲಿ ಆಡುವ ಎಲ್ಲ 10 ತಂಡಗಳ ನಾಯಕರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಅಕ್ಟೋಬರ್​ 5ರಂದು ಅಹಮದಾಬಾದ್​ನಲ್ಲೇ ನಡೆಯಲಿರುವ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲೆಂಡ್​ ನಡುವಿನ ಉದ್ಘಾಟನಾ ಪಂದ್ಯದ ಟಿಕೆಟ್​ ಹೊಂದಿರುವವರು, ಅದೇ ಟಿಕೆಟ್​ನೊಂದಿಗೆ ಆರಂಭೋತ್ಸವಕ್ಕೂ ಹಾಜರಾಗಬಹುದು. ಐಸಿಸಿ ಮತ್ತು ಬಿಸಿಸಿಐನ ಪದಾಧಿಕಾರಿಗಳು, ವಿವಿಧ ದೇಶಗಳ ಕ್ರಿಕೆಟ್​ ಮಂಡಳಿಗಳ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net