ಅಂಧರ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದ ಕರ್ನಾಟಕ

blind cricket web
Published on

ಬೆಂಗಳೂರು: ಆತಿಥೇಯ ಕರ್ನಾಟಕ ತಂಡ 3ನೇ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದೆ. ಆರಂಭಿಕ ಪ್ರಕಾಶ್ ಜಯರಾಮಯ್ಯ (99*ರನ್, 48 ಎಸೆತ, 20 ಬೌಂಡರಿ) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಭಾನುವಾರ ನಡೆದ ಕ್ವಾರ್ಟರ್​ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 10 ವಿಕೆಟ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು.

ಬೆಂಗಳೂರು ಹೊರವಲಯದಲ್ಲಿರುವ ಅಲ್ಟಾಯ್ರಾ ಮೈದಾನದಲ್ಲಿ ನಡೆದ 8ರ ಘಟ್ಟದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ 6 ವಿಕೆಟ್‌ಗೆ 169 ರನ್ ಪೇರಿಸಿತು. ಪ್ರತಿಯಾಗಿ ಕರ್ನಾಟಕ ತಂಡ 13.4 ಓವರ್‌ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 173 ರನ್ ಬಾರಿಸಿ ಗೆಲುವು ಸಾಧಿಸಿತು. ಕಳೆದ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದ್ದ ಪ್ರಕಾಶ್ ಜಯರಾಮಯ್ಯಗೆ ಮತ್ತೋರ್ವ ಆರಂಭಿಕ ಸಿ. ಉಮೇಶ್ (63*ರನ್, 36 ಎಸೆತ, 12 ಬೌಂಡರಿ) ಉತ್ತಮ ಸಾಥ್ ನೀಡಿದರು.

ಕರ್ನಾಟಕ ತಂಡ ಸೋಮವಾರ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಒಡಿಶಾ ಸವಾಲು ಎದುರಿಸಲಿದೆ. ಆಂಧ್ರಪ್ರದೇಶ ಮತ್ತು ಹರಿಯಾಣ ತಂಡಗಳು ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಕ್ವಾರ್ಟರ್​ಫೈನಲ್ ಕಾದಾಟದಲ್ಲಿ ಒಡಿಶಾ ತಂಡ ಜಾರ್ಖಂಡ್ ವಿರುದ್ಧ, ಆಂಧ್ರ ತಂಡ ಗುಜರಾತ್ ವಿರುದ್ಧ ಮತ್ತು ಹರಿಯಾಣ ತಂಡ ಕೇರಳ ವಿರುದ್ಧ ಗೆಲುವು ದಾಖಲಿಸಿತು.

ತಮಿಳುನಾಡು: 6 ವಿಕೆಟ್‌ಗೆ 169 (ಪಿ. ಅರುಣ್ ಕುಮಾರ್ 85*), ಕರ್ನಾಟಕ: 13.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 173 (ಪ್ರಕಾಶ್ ಜಯರಾಮಯ್ಯ 99*, ಸಿ. ಉಮೇಶ್ 63*).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net