ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​​ನಲ್ಲಿ ಮಿಂಚಿದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್​ ದೇವಿ

web sheetal
Published on

ಪ್ಯಾರಿಸ್: ಭಾರತದ ಎರಡೂ ಕೈಗಳಿಲ್ಲದ ಬಿಲ್ಗಾರ್ತಿ ಶೀತಲ್​ ದೇವಿ ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನ ಆರ್ಚರಿ ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಕಂಪೌಂಡ್​ ವಿಭಾಗದ ರ್ಯಾಂಕಿಂಗ್​ ಸುತ್ತಿನಲ್ಲಿ 2ನೇ ಸ್ಥಾನ ಸಂಪಾದಿಸಿದ್ದು, ನೇರವಾಗಿ 16ರ ಟ್ಟಕ್ಕೆ ಪ್ರವೇಶ ಪಡೆದಿದ್ದಾರೆ. ಜಮ್ಮು-ಕಾಶ್ಮೀರದ 17 ವರ್ಷದ ಶೀತಲ್​ 720ರಲ್ಲಿ 703 ಅಂಕ ಕಲೆಹಾಕಿದರೆ, ಟರ್ಕಿಯ ಒಜ್ನುರ್​ ರ್ಗಿಡಿ ವಿಶ್ವದಾಖಲೆಯ 704 ಅಂಕ ಗಳಿಸಿ ಅಗ್ರಸ್ಥಾನ ಪಡೆದರು. ಕಾಲಿನಲ್ಲೇ ಬಿಲ್ಲು-ಬಾಣ ಹಿಡಿದು ಗುರಿಯಿಡುವ ಶೀತಲ್​ ಕೂಡ ಹಿಂದಿನ ವಿಶ್ವದಾಖಲೆಯಾದ 698ಕ್ಕಿಂತ ಹೆಚ್ಚಿನ ಅಂಕ ಗಳಿಸಿದರು. ಪುರುಷರ ವಿಭಾಗದಲ್ಲಿ ರಾಕೇಶ್​ (696) 5ನೇ ಸ್ಥಾನ ಪಡೆದರು. ಇದರಿಂದ ಶೀತಲ್​ ದೇವಿ-ರಾಕೇಶ್​ ಜೋಡಿ (1,344) ಮಿಶ್ರ ತಂಡ ವಿಭಾಗದ ಸ್ಪರ್ಧೆಗೆ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ.

ಟೇಕ್ವಾಂಡೊ, ಸೈಕ್ಲಿಂಗ್​ನಲ್ಲಿ ನಿರಾಸೆ

ಭಾರತದ ಅರುಣ ತನ್ವರ್​ ಟೇಕ್ವಾಂಡೊ ಸ್ಪರ್ಧೆಯ ಮಹಿಳೆಯರ ಕೆ44-47 ಕೆಜಿ ವಿಭಾಗದ 16ರ ಘಟ್ಟದಲ್ಲಿ ಟರ್ಕಿಯ ನುರ್ಸಿಹಾನ್​ ಎಕಿನ್ಸಿ ವಿರುದ್ಧ 0-19ರಿಂದ ಪರಾಭವಗೊಂಡರು. ಮೊಣಕೈ ಮೇಲೆ ಒಂದು ತೋಳಿನಲ್ಲಿ ದುರ್ಬಲತೆ ಹೊಂದಿರುವ ಕ್ರೀಡಾಪಟುಗಳ ಈ ವಿಭಾಗದಲ್ಲಿ ಅರುಣ ಸಂಪೂರ್ಣ ವೈಫಲ್ಯ ಅನುಭವಿಸಿದರು. ಇದರೊಂದಿಗೆ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು. ಅರುಣ ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾಗವಹಿಸಿದ ಏಕೈಕ ಭಾರತೀಯರಾಗಿದ್ದಾರೆ. ಮತ್ತೊಂದೆಡೆ ಸೈಕ್ಲಿಂಗ್​ನಲ್ಲಿ ಭಾರತದ ಜ್ಯೋತಿ ಗಡೇರಿಯಾ ಮಹಿಳೆಯರ ಸಿ1-3 3,000 ಮೀ. ವೈಯಕ್ತಿಕ ಪಸ್ಯೂರ್ಟ್​ ವಿಭಾಗದಲ್ಲಿ 10ನೇ ಸ್ಥಾನ ಪಡೆದು ಅರ್ಹತಾ ಸುತ್ತಿನಲ್ಲಿ ಕೊನೇ ಸ್ಥಾನಕ್ಕೆ ತೃಪ್ತಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net