ಎಸ್​ಆರ್​ಎಚ್ ವಿರುದ್ಧ ಭರ್ಜರಿ ಗೆಲುವು: ಈ ಪವಾಡ ನಡೆದರಷ್ಟೇ ಆರ್​ಸಿಬಿ ಪ್ಲೇ ಆಫ್ ಪ್ರವೇಶ ಸಾಧ್ಯ!

RCB
Published on

ಹೈದರಾಬಾದ್​: ನಿನ್ನೆ (ಏಪ್ರಿಲ್​ 25) ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್​ಆರ್​ಎಚ್​) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡ 35 ರನ್​ಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿತು.

ಉತ್ತಮ ಫಾರ್ಮ್​ನಲ್ಲಿರುವ ಎಸ್‌ಆರ್‌ಎಚ್‌, ಆರ್‌ಸಿಬಿ ವಿರುದ್ಧ ಟಾಸ್​ ಗೆದ್ದು ಮೊದಲು ಬ್ಯಾಟ್ ಮಾಡಿದರೆ ಸುಲಭವಾಗಿ 300ಕ್ಕೂ ಹೆಚ್ಚು ರನ್ ಗಳಿಸುತ್ತದೆ ಎಂದು ಹಲವು ಕ್ರಿಕೆಟ್ ಅಭಿಮಾನಿಗಳು ಭಾವಿಸಿದ್ದರು. ಆದರೆ, ನಡೆದಿದ್ದೇ ಬೇರೆ. ಆರ್‌ಸಿಬಿ ಆಲ್‌ರೌಂಡರ್‌ ಪ್ರದರ್ಶನದ ಮುಂದೆ ಎಸ್‌ಆರ್‌ಎಚ್ ತಲೆಬಾಗಿತು. ಈ ಗೆಲುವಿನೊಂದಿಗೆ ಆರ್‌ಸಿಬಿಯ ಪ್ಲೇ ಆಫ್‌ ಆಸೆ ಮತ್ತೆ ಚಿಗುರಿದೆ. ಇದುವರೆಗೆ 9 ಪಂದ್ಯಗಳನ್ನಾಡಿರುವ ಆರ್‌ಸಿಬಿ 2 ಪಂದ್ಯ ಗೆದ್ದು, 4 ಅಂಕಗಳನ್ನು ಗಳಿಸಿದೆ. ಆದಾಗ್ಯೂ, ಪ್ಲೇ ಆಫ್‌ ಹಂತಕ್ಕೆ ಹೋಗುವುದು ಆರ್​ಸಿಬಿಗೆ ತುಂಬಾ ಕಷ್ಟವಿದೆ. ಆದರೆ, ಅಸಾಧ್ಯವಲ್ಲ. ಆರ್‌ಸಿಬಿ ಪ್ಲೇಆಫ್‌ಗೆ ಪ್ರವೇಶಿಸಬೇಕಾದರೆ ಕೆಲವು ಪವಾಡಗಳು ಸಂಭವಿಸಬೇಕಿದೆ.

ಸದ್ಯ ಆರ್‌ಸಿಬಿ ಖಾತೆಯಲ್ಲಿ 4 ಅಂಕಗಳಿವೆ. ಇನ್ನುಳಿದ 5 ಪಂದ್ಯಗಳನ್ನು ಗೆದ್ದರೆ ಆರ್‌ಸಿಬಿ ಒಟ್ಟು 14 ಅಂಕ ಗಳಿಸಲಿದೆ. 14 ಅಂಕಗಳೊಂದಿಗೆ ಆರ್‌ಸಿಬಿ ಪ್ಲೇ ಆಫ್‌ ಪ್ರವೇಶಿಸುವ ನಿರೀಕ್ಷೆಯಲ್ಲಿ ಯಾವುದೇ ತಪ್ಪಿಲ್ಲ. ಆದರೂ, 14 ಅಂಕಗಳು ಸಾಕಾಗುವುದಿಲ್ಲ. ಹೀಗಾಗಿ ಇತರ ತಂಡಗಳ ಫಲಿತಾಂಶಗಳನ್ನು ಆರ್​ಸಿಬಿ ಅವಲಂಬಿಸಬೇಕಾಗುತ್ತದೆ. ಆರ್​ಸಿಬಿ ಪ್ಲೇ ಆಫ್​ ಪ್ರವೇಶಕ್ಕಾಗಿ ಕೆಲವು ತಂಡಗಳು ಗೆಲ್ಲಬೇಕಿದೆ ಮತ್ತು ಕೆಲವು ತಂಡಗಳು ಸೋಲಬೇಕಿದೆ. ಅಲ್ಲದೆ, ಕೆಲವು ಪಂದ್ಯಗಳು ರದ್ದಾದರೆ ಆರ್​ಸಿಬಿಗೆ ಪ್ಲಸ್ ಆಗಲಿದೆ.

ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸುವ ಮೊದಲು, ಆರ್​ಸಿಬಿ ಉಳಿದ ಐದೂ ಪಂದ್ಯಗಳನ್ನು ಗೆಲ್ಲಬೇಕಿದೆ. ಸುಮ್ಮನೇ ಗೆದ್ದರೆ ಸಾಲದು ಅದು ಕೂಡ ಭಾರಿ ರನ್ ಅಂತರದಲ್ಲಿ ಗೆಲುವು ಸಾಧಿಸಬೇಕು. ಈ ಮೂಲಕ ರೇಟ್ ಭಾರೀ ಪ್ರಮಾಣದಲ್ಲಿ ಸುಧಾರಿಸಬೇಕಿದೆ. ಇದು ನಡೆದರೆ ಆರ್​ಸಿಬಿ ಪ್ಲೇ ಆಫ್ ಸೇರಬಹುದು. ಆರ್‌ಸಿಬಿ ಬೇರೆ ತಂಡಗಳ ಮೇಲೆ ಅವಲಂಬಿತವಾಗಿದ್ದರೂ ಮೊದಲು ತಮ್ಮ ಕೈಯಲ್ಲಿರುವ ಕೆಲಸವನ್ನು ಶೇ.100ರಷ್ಟು ಪೂರ್ಣಗೊಳಿಸಬೇಕು.

ಆರ್‌ಸಿಬಿ ತಂಡದ ಸದ್ಯದ ಫಾರ್ಮ್ ನೋಡಿದರೆ ಉಳಿದ ಪಂದ್ಯಗಳನ್ನು ಗೆಲ್ಲುವುದು ಕಷ್ಟವೇನಲ್ಲ. ಆದರೂ, ಭರವಸೆಯನ್ನು ಹಿಡಿದಿಟ್ಟುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಮೇಲಾಗಿ ಆರ್‌ಸಿಬಿ ತಂಡವನ್ನು ಕಡಿಮೆ ಅಂದಾಜು ಮಾಡಬಾರದು. 2016ರ ಸೀಸನ್​ನಲ್ಲಿ ತಂಡವು ಮೊದಲ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿತ್ತು. ನಂತರ ಸತತ ಗೆಲುವಿನೊಂದಿಗೆ ಫೈನಲ್ ತಲುಪಿತ್ತು. ಈ ಋತುವಿನಲ್ಲಿ ಅಂತಹ ಅಸಾಮಾನ್ಯ ಪ್ರದರ್ಶನದ ಜೊತೆಗೆ ಅದೃಷ್ಟ ಕೂಡಿ ಬಂದರೆ, ಆರ್‌ಸಿಬಿ ಪ್ಲೇ ಆಫ್‌ಗೆ ಹೋಗುತ್ತದೆ. ಅಂದಹಾಗೆ ಆರ್​ಸಿಬಿ ಪ್ಲೇ ಆಫ್ ಅವಕಾಶಗಳ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ಗಳ ರೂಪದಲ್ಲಿ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net