More

    ದೇಶದ ಹಿತಕ್ಕೆ ಕರ್ನಾಟಕ ಮತ; ಮೊದಲ ಹಂತದಲ್ಲಿ 14 ಲೋಕಸಭೆ ಕ್ಷೇತ್ರಗಳಿಗೆ ಮತದಾನ

    ಐದು ವರ್ಷಕ್ಕೊಮ್ಮೆ ನಡೆಯುವ ಸಂವಿಧಾನದ ಹಬ್ಬ ಬಂದೇ ಬಿಟ್ಟಿದೆ. ಮತದಾನದ ಹಕ್ಕು ಚಲಾಯಿಸಲು ಇದೊಂದು ಸದವಕಾಶ. ಹೀಗಾಗಿ ಮರೆಯದೆ ಮತದಾನ ಮಾಡಿ, ಬಳಿಕವಷ್ಟೇ ಪ್ರವಾಸ, ಶಾಪಿಂಗ್, ಔಟಿಂಗ್ ಆದ್ಯತೆಯಾಗಿರಲಿ. ನಿಮ್ಮ ಕುಟುಂಬ ವರ್ಗ, ಸ್ನೇಹಿತರು, ನೆರೆಹೊರೆಯವರನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿ. ಈ ನಿಮ್ಮ ಪ್ರಯತ್ನ ದೇಶದ ಭವಿಷ್ಯ ನಿರ್ಧರಿಸಲಿದೆ.

    ಬೆಂಗಳೂರು: ಚೊಂಬು- ಚಿಪ್ಪು ಕುಸ್ತಿ, ಒಕ್ಕಲಿಗರ ಅಸ್ಮಿತೆಗಾಗಿ ಕಿತ್ತಾಟ, ಮರು ಸ್ಪರ್ಧೆ ಅವಕಾಶ ಕಳೆದುಕೊಂಡ ಹಾಲಿ ಸಂಸದರ ಒಳ ಮುನಿಸು, ಕೇಂದ್ರ, ರಾಜ್ಯ ಸರ್ಕಾರದ ನಡುವಿನ ಬರ ಪರಿಹಾರ ಕದನದಂತಹ ಬೆಳವಣಿಗೆಗಳನ್ನು ಸಾಕ್ಷೀಕರಿಸಿದ ಮತ್ತು ರಾಜ್ಯ ರಾಜಕೀಯದ ಮುಂದಿನ ಭವಿಷ್ಯ ನಿರ್ಣಯಿಸುವ ಬೆಳವಣಿಗೆಗೂ ಕಾರಣವಾಗಬಹುದಾದ 18ನೇ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಕರ್ನಾಟಕ ಸಜ್ಜಾಗಿದೆ. ಒಟ್ಟು 28 ಲೋಕಸಭಾ ಕ್ಷೇತ್ರಗಳ ಪೈಕಿ ಶುಕ್ರವಾರ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

    ದಕ್ಷಿಣ ಕರ್ನಾಟಕದ 2.88 ಕೋಟಿ ಮತದಾರರು ಕಣದಲ್ಲಿರುವ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಣಯಿಸಲಿದ್ದಾರೆ. ಈ ಚುನಾವಣೆ ದೇಶವನ್ನಾಳುವ ಪ್ರಧಾನಿಯನ್ನು ಆಯ್ಕೆ ಮಾಡುವುದಕ್ಕೋ ಅಥವಾ ಸಂಸದರನ್ನು ಆರಿಸಿ ಕಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಮುಖ್ಯವಾಗಿ ರಾಜ್ಯದ ಪ್ರಮುಖ ನಾಯಕರ ಭವಿಷ್ಯವನ್ನು ಮೊದಲ ಹಂತದ ಮತದಾನ ನಿರ್ಧರಿಸಲಿದೆ. ಇದೇ ಕಾರಣಕ್ಕೆ ಮೂರೂ ಪಕ್ಷಗಳ ದಿಗ್ಗಜರು ಕಳೆದೊಂದು ತಿಂಗಳಿಂದ ಶತಪ್ರಯತ್ನ ಮಾಡಿ ತಮ್ಮ ಅಸ್ತಿತ್ವ ಭದ್ರಪಡಿಸಿಕೊಳ್ಳಲು ಬೆವರು ಹರಿಸಿದ್ದಾರೆ.

    ನಾಯಕರಿಗೂ ಪ್ರತಿಷ್ಠೆ: ಸಿಎಂ ಸಿದ್ದರಾಮಯ್ಯಗೆ ತವರು ಮೈಸೂರಿನಲ್ಲಿ ಪಕ್ಷ ಗೆಲ್ಲಿಸುವುದು ಸವಾಲಿನ ಕೆಲಸವಾಗಿದೆ. ಅದೇ ರೀತಿ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರನನ್ನು ಬೆಂಗಳೂರು ಗ್ರಾಮಾಂತರದಲ್ಲಿ ಗೆಲ್ಲಿಸಿಕೊಳ್ಳಬೇಕಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿಯವರಿಗೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನದಲ್ಲಿ ಗೆಲ್ಲುವುದು ಪ್ರತಿಷ್ಠೆಯಾಗಿದೆ. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ವಲಸೆ ಬಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಚಿವೆ ಶೋಭಾ ಕರಂದ್ಲಾಜೆ ರಾಜಕೀಯ ಭವಿಷ್ಯ ಕೂಡ ಅಡಗಿದೆ.

    ಹೈ ಪ್ರೊಫೈಲ್ ಕ್ಷೇತ್ರಗಳು: 14ಕ್ಷೇತ್ರಗಳ ಪೈಕಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿರುವ ಮಂಡ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ, ಬಿಜೆಪಿಯಿಂದ ದೇವೇಗೌಡರ ಅಳಿಯ ಡಾ. ಸಿ.ಎನ್. ಮಂಜು ನಾಥ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ, ಮೈಸೂರು ಕ್ಷೇತ್ರ ಸಿಎಂ ತವರು ಜಿಲ್ಲೆಯ ಕಾರಣಕ್ಕೆ ಹೈ-ಪ್ರೊಫೈಲ್ ಕ್ಷೇತ್ರಗಳಾಗಿ ಗುರುತಿಸಿಕೊಂಡಿವೆ.

    1 ಕಾಂಗ್ರೆಸ್​ಗೆ ದಿಕ್ಸೂಚಿ: ಗ್ಯಾರಂಟಿ ಯೋಜನೆ ಪರಿಣಾಮ ಅಳೆಯುವುದಕ್ಕೆ ಈ ಚುನಾವಣೆ ಒಂದು ತಕ್ಕಡಿ ಆಗಲಿದೆ. ಇದಿಷ್ಟೇ ಅಲ್ಲ ನಾಯಕತ್ವ ವಿಚಾರದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಡುವೆ ಆಗಿದೆ ಎನ್ನಲಾದ ನಾಲ್ಕು ಗೋಡೆ ನಡುವಿನ ಒಪ್ಪಂದ ಬಹಿರಂಗವಾಗಿಲ್ಲ. ಈ ಚುನಾವಣೆ ಬಳಿಕ ಆ ಗುಟ್ಟು ರಟ್ಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಜಯಸಿದಲ್ಲಿ ಒಂದು ರೀತಿಯ ಪರಿಣಾಮ ಉಂಟಾದರೆ ಸೋತರೆ ಮತ್ತೊಂದು ಮಗ್ಗುಲಿನಲ್ಲಿ ರಾಜಕೀಯ ಬೆಳವಣಿಗೆ ನಡೆಯುವ ಸಾಧ್ಯತೆ ಇದೆ.

    2 ಜೆಡಿಎಸ್​ಗೆ ಅಸ್ತಿತ್ವದ ಪ್ರಶ್ನೆ: ಬಿಜೆಪಿ, ಜೆಡಿಎಸ್ ಮೈತ್ರಿ ಯಾವ ರೀತಿ ಪರಿಣಾಮ ಬೀರಿದೆ, ಪರಸ್ಪರ ಎಷ್ಟು ಲಾಭ ಆಗಿದೆ ಎಂಬುದರ ಮೇಲೆ ಮುಂದಿನ ರಾಜಕೀಯ ಲೆಕ್ಕಾಚಾರ ಶುರುವಾಗಲಿದೆ. ಮೊದಲ ಸುತ್ತಿನಲ್ಲಿ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಮೈತ್ರಿಗೆ ಮಹತ್ವವಿದೆ. ಈ ಫಲಿತಾಂಶದಲ್ಲೇ ಜೆಡಿಎಸ್ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ. ಮೈತ್ರಿ ಫಲಿಸಿದರೆ ಮುಂದೆಯೂ ಒಟ್ಟಿಗೆ ಹೆಜ್ಜೆ ಹಾಕಲು ಅವಕಾಶವಾಗಲಿದೆ.

    3 ಬಿಜೆಪಿಗೆ ಸವಾಲು: ದಕ್ಷಿಣ ಭಾರತದಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕೆಂಬ ಬಿಜೆಪಿ ರಾಷ್ಟ್ರ ನಾಯಕರ ಕನಸಿಗೆ ಕರ್ನಾಟಕವೇ ಆಶಾಕಿರಣ. ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲಿ ಬಿಜೆಪಿ ಮತಗಳಿಕೆ ಹೆಚ್ಚಾಗಬಹುದು. ಆದರೆ, ಸೀಟುಗಳು ಹೆಚ್ಚಾಗುವ ಸಾಧ್ಯತೆ ಕಡಿಮೆ ಇದೆ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯ ನಾಯಕರ ಮೇಲೆ ಹೆಚ್ಚಿನ ಹೊಣೆಗಾರಿಕೆ ಇದೆ. ಮೊದಲ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳ ಮೇಲೂ ಬಿಜೆಪಿ ವರಿಷ್ಠರು ಹೆಚ್ಚಿನ ವಿಶ್ವಾಸ ಇಟ್ಟುಕೊಂಡಿದ್ದಾರೆ.

    ಮತದಾನ ನಡೆಯುವ ಕ್ಷೇತ್ರ: ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ.

    ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುತ್ತಿದೆ, ಈ ಚುನಾವಣೆ ರಾಜಕೀಯ ಪಕ್ಷಗಳ ನಡುವಿನ ಚುನಾವಣೆ ಎನ್ನುವುದಕ್ಕಿಂತಲೂ ಭಾರತವನ್ನು ಗೆಲ್ಲಿಸಬೇಕಾದ ಚುನಾವಣೆಯಾಗಿದೆ. ಅದಕ್ಕಾಗಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿಸುವುದು ಭಾರತೀಯರ ಪಾಲಿಗೆ ಒಂದು ಶ್ರೇಷ್ಠ ಅವಕಾಶವಾಗಿದೆ.

    | ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

    ಕಾಂಗ್ರೆಸ್ ನುಡಿದಂತೆ ನಡೆದಿದೆ. ಮುಂದೆಯೂ ಪ್ರತಿಯೊಬ್ಬರ ಬದುಕು ಬದಲಾವಣೆ ತರಲು ಕೆಲಸ ಮಾಡಲಿದೆ, ಮತದಾರರು ಈ ಭರವಸೆಗಳ ಬಗ್ಗೆ ಆಲೋಚಿಸಿ ಬೆಂಬಲ ನೀಡಬೇಕು. ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ಜನರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ.

    | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts