

ಬ್ರಿಸ್ಬೇನ್: ತವರಿನಲ್ಲಿ ನ್ಯೂಜಿಲೆಂಡ್ ಎದುರು ವೈಟ್ವಾಷ್ ಸೋಲು ಅನುಭವಿಸಿದರೂ ಭಾರತ ತಂಡ ಪರ್ತ್ನಲ್ಲಿ ಆಡಿದ ಆಸ್ಟ್ರೆಲಿಯಾ ಪ್ರವಾಸದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಗೆದ್ದು ಬೀಗಿತ್ತು. ಆದರೆ ನಾಯಕ ರೋಹಿತ್ ಶರ್ಮ ಪಿತೃತ್ವ ರಜೆಯಿಂದ ಮರಳಿದ ನಂತರ ಭಾರತ ತಂಡ ಅಡಿಲೇಡ್ನಲ್ಲಿ ಮತ್ತೆ ಹಳೆಯ ತಂಡದಂತೆಯೇ ಆಡಿ ಸೋತಿದೆ. ರೋಹಿತ್ ಶರ್ಮ ಸಾರಥ್ಯದಲ್ಲಿ ಭಾರತ ತಂಡ ಸತತ 4ನೇ ಟೆಸ್ಟ್ ಸೋಲು ಅನುಭವಿಸಿದೆ. ಇದರೊಂದಿಗೆ ರೋಹಿತ್ ಮೇಲೆ ಒತ್ತಡ ಹೆಚ್ಚಿದೆ. ನಾಯಕತ್ವದ ಜತೆಗೆ ಬ್ಯಾಟಿಂಗ್ನಲ್ಲೂ ರನ್ಬರ ಎದುರಿಸಿರುವುದು ಅವರನ್ನು ಹೆಚ್ಚಿನ ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಶನಿವಾರದಿಂದ ಬ್ರಿಸ್ಬೇನ್ನಲ್ಲಿ ನಡೆಯಲಿರುವ ಸರಣಿಯ 3ನೇ ಪಂದ್ಯ ರೋಹಿತ್ ಪಾಲಿಗೆ ಸತ್ವಪರೀಕ್ಷೆ ಎನಿಸಿದೆ.
ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ರೋಹಿತ್ ಸಾರಥ್ಯದಲ್ಲೇ ಸತತ 4 ಟೆಸ್ಟ್ ಗೆದ್ದು ಬೀಗಿತ್ತು. ನಂತರ ಬಾಂಗ್ಲಾ ವಿರುದ್ಧವೂ ಸತತ 2 ಟೆಸ್ಟ್ ಗೆದ್ದಿತ್ತು. ಆದರೆ ಕಿವೀಸ್ ಸರಣಿಯ ನಂತರ ಭಾರತ ಲಯ ತಪ್ಪಿದೆ. ಪರ್ತ್ನಲ್ಲಿ ಜಸ್ಪ್ರೀತ್ ಬುಮ್ರಾ ಹಂಗಾಮಿ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿತ್ತು. ಹೀಗಾಗಿ ರೋಹಿತ್ ಟೆಸ್ಟ್ ನಾಯಕತ್ವ ಉಳಿಸಿಕೊಳ್ಳಲು ತಂಡವನ್ನು ಮತ್ತೆ ಗೆಲುವಿನ ಹಳಿಗೆ ತರಬೇಕಾದ ಸವಾಲು ಎದುರಿಸುತ್ತಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ನಿಟ್ಟಿನಲ್ಲಿ ಭಾರತಕ್ಕೆ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿ ನಿರ್ಣಾಯಕವೆನಿಸಿದೆ. ಈ ಸರಣಿ ಟೆಸ್ಟ್ ತರಬೇತುದಾರರಾಗಿ ಗೌತಮ್ ಗಂಭೀರ್ ಭವಿಷ್ಯವನ್ನು ನಿರ್ಧರಿಸಲಿದೆ. ಅದೇ ರೀತಿ ರೋಹಿತ್ ಟೆಸ್ಟ್ ನಾಯಕರಾಗಿ ಮುಂದುವರಿಯುವ ನಿಟ್ಟಿನಲ್ಲೂ ಈ ಸರಣಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಹರಡಿದೆ.
ರೋಹಿತ್ ನಾಯಕತ್ವಕ್ಕೆ ಟೀಕೆ
ಅಡಿಲೇಡ್ ಟೆಸ್ಟ್ನಲ್ಲಿ ಎರಡೂವರೆ ದಿನಗಳಲ್ಲೇ ಸೋತ ಬೆನ್ನಲ್ಲೇ ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಟೀಕೆಗಳು ಎದ್ದಿವೆ. ಪಿಂಕ್ಬಾಲ್ನಲ್ಲಿ ರೋಹಿತ್ ಬೌಲರ್ಗಳನ್ನು ಆವರ್ತನ ಮಾಡಿದ ರೀತಿಗೆ ಟೀಕೆಗಳು ಎದುರಾಗಿವೆ. ರೋಹಿತ್ ಬೌಲಿಂಗ್ನಲ್ಲಿ ರಕ್ಷಣಾತ್ಮಕ ತಂತ್ರ ಅನುಸರಿಸಿದ್ದು ಭಾರತ ಮೊದಲ ಇನಿಂಗ್ಸ್ನಲ್ಲಿ ಹೆಚ್ಚಿನ ಹಿನ್ನಡೆ ಅನುಭವಿಸಲು ಕಾರಣವಾಯಿತು ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ವಿಶ್ಲೇಷಿಸಿದ್ದಾರೆ. ಸ್ಟೀವನ್ ಸ್ಮಿತ್ರನ್ನು ಬುಮ್ರಾ ಔಟ್ ಮಾಡಿದ ಬೆನ್ನಲ್ಲೇ ಅವರನ್ನು ಬೌಲಿಂಗ್ನಿಂದ ಹೊರಗಿಡಲಾಯಿತು. ಆಗ ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ಗೆ ಇಳಿದರು. ಮೊದಲ ದಿನದ 33 ಓವರ್ಗಳಲ್ಲಿ ಅಶ್ವಿನ್ ಕೇವಲ 1 ಓವರ್ ಎಸೆದರು. 2ನೇ ದಿನವೂ ಬುಮ್ರಾ ವಿಕೆಟ್ ಬೇಟೆಯಾಡುವ ಹಂತದಲ್ಲೇ ಅಶ್ವಿನ್ರನ್ನು ದಾಳಿಗೆ ಇಳಿಸಲಾಯಿತು ಎಂದು ಮತ್ತೋರ್ವ ಮಾಜಿ ಕ್ರಿಕೆಟಿಗ ಜತಿನ್ ಪರಾಂಜಪೆ ದೂರಿದ್ದಾರೆ. ಟ್ರಾವಿಸ್ ಹೆಡ್ ಶಾರ್ಟ್ ಬಾಲ್ ಎದುರು ದೌರ್ಬಲ್ಯ ಹೊಂದಿದ್ದರೂ, ಭಾರತೀಯ ಬೌಲರ್ಗಳು ಅವರಿಗೆ ಹೆಚ್ಚಿನ ಶಾರ್ಟ್ ಬಾಲ್ ಎಸೆಯದೆ ಶತಕ ಸಿಡಿಸಲು ಅವಕಾಶ ಮಾಡಿಕೊಟ್ಟರು ಎಂದು ಸರಣಿಯಲ್ಲಿ ವೀಕ್ಷಕವಿವರಣೆಕಾರ ಆಗಿರುವ ಕ್ರಿಕೆಟಿಗ ಚೇತೇಶ್ವರ ಪೂಜಾರ ಟೀಕಿಸಿದ್ದಾರೆ.
ಆರು ಟೆಸ್ಟ್ಗಳಲ್ಲಿ ಒಂದೇ ಅರ್ಧಶತಕ!
ರೋಹಿತ್ ಶರ್ಮ ಸೆಪ್ಟೆಂಬರ್ನಿಂದ ಇದುವರೆಗೆ ಆಡಿರುವ 6 ಟೆಸ್ಟ್ಗಳಲ್ಲಿ ಒಂದೇ ಅರ್ಧಶತಕ ಬಾರಿಸಿದ್ದು, ಕೇವಲ 11.83 ರನ್ ಸರಾಸರಿ ಹೊಂದಿದ್ದಾರೆ. ಬಾಂಗ್ಲಾ ಸರಣಿಯ 4 ಇನಿಂಗ್ಸ್ಗಳಲ್ಲಿ 6, 5, 23, 8 ರನ್ ಗಳಿಸಿ ವಿಲರಾಗಿದ್ದ ರೋಹಿತ್, ಕಿವೀಸ್ ವಿರುದ್ಧ ಬೆಂಗಳೂರು ಟೆಸ್ಟ್ನಲ್ಲಿ 2, 52 ರನ್ ಗಳಿಸಿದ್ದರು. ನಂತರದ 2 ಟೆಸ್ಟ್ಗಳಲ್ಲಿ 0, 8, 18, 11 ರನ್ ಗಳಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡಿದ ಅಡಿಲೇಡ್ ಟೆಸ್ಟ್ನಲ್ಲೂ 3, 6 ರನ್ ಗಳಿಸಿ ಔಟಾಗಿದ್ದರು. ಹಾಲಿ ವರ್ಷ 3 ಟೆಸ್ಟ್ಗಳಲ್ಲಿ ರೋಹಿತ್ ಎರಡೂ ಇನಿಂಗ್ಸ್ಗಳಲ್ಲಿ ಒಂದಂಕಿಗೆ ಔಟ್ ಆಗಿದ್ದಾರೆ. ಕೊನೇ 12 ಇನಿಂಗ್ಸ್ಗಳಲ್ಲಿ 8 ಬಾರಿ ಒಂದಂಕಿಗೆ ಔಟಾಗಿದ್ದಾರೆ.
ಆರಂಭಿಕನ ಸ್ಥಾನಕ್ಕೆ ವಾಪಸ್?
ಪರ್ತ್ ಟೆಸ್ಟ್ ಯಶಸ್ಸಿನ ಬಳಿಕ ಕನ್ನಡಿಗ ಕೆಎಲ್ ರಾಹುಲ್ರನ್ನು (37, 7) ಅಡಿಲೇಡ್ನಲ್ಲೂ ಆರಂಭಿಕರಾಗಿ ಮುಂದುವರಿಸಿದರೂ, ಅದೇ ನಿರ್ವಹಣೆ ಪುನರಾವರ್ತಿಸಲು ವಿಫಲರಾಗಿದ್ದರು. ಇತ್ತ ರೋಹಿತ್ ಶರ್ಮ 6ನೇ ಕ್ರಮಾಂಕದಲ್ಲಿ ಆಡಿ ವೈಫಲ್ಯ ಅನುಭವಿಸಿದರು. ಇದರಿಂದ ಬ್ರಿಸ್ಬೇನ್ ಟೆಸ್ಟ್ನಿಂದ ರೋಹಿತ್ ಮತ್ತೆ ಆರಂಭಿಕರಾಗಿ ಆಡುವ ಸಾಧ್ಯತೆ ಕಾಣಿಸಿದೆ. ಮಾಜಿ ಕ್ರಿಕೆಟಿಗರಾದ ಸುನೀಲ್ ಗಾವಸ್ಕರ್, ರವಿಶಾಸ್ತ್ರಿ ಕೂಡ ರೋಹಿತ್ ಮತ್ತೆ ಆರಂಭಿಕರಾಗಿ ಆಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ 2018ರಿಂದಲೂ ಟೆಸ್ಟ್ನಲ್ಲಿ ಆರಂಭಿಕರಾಗಿಯೇ ಆಡುತ್ತ ಬಂದಿದ್ದಾರೆ.
*ರೋಹಿತ್ ತನ್ನ ಸಾಮರ್ಥ್ಯ ನಿರೂಪಿಸುವ ಅಗತ್ಯವಿಲ್ಲ. ಅವರು ಪುಟಿದೇಳುವ ಬಗ್ಗೆಯೂ ಅನುಮಾನ ಬೇಡ. ಅವರು ಶ್ರೀ ಾಮ್ರ್ಗೆ ಮರಳುವ ಭರವಸೆ ಇದೆ. ರೋಹಿತ್ ನಾಯಕತ್ವವನ್ನೂ ಒಂದೆರಡು ಪಂದ್ಯಗಳಿಂದ ಅಂದಾಜಿಸುವುದು ಬೇಡ. 6 ತಿಂಗಳ ಹಿಂದಷ್ಟೇ ಅವರು ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದಾರೆ ಎಂಬುದನ್ನು ಮರೆಯಬಾರದು.
| ಕಪಿಲ್ ದೇವ್
*ಕೊನೇ 6 ಟೆಸ್ಟ್ಗಳಲ್ಲಿ ರೋಹಿತ್
ಬಾಂಗ್ಲಾ ಎದುರು ಚೆನ್ನೈ: 6, 5
ಬಾಂಗ್ಲಾ ಎದುರು ಕಾನ್ಪುರ: 23, 8
ಕಿವೀಸ್ ಎದುರು ಬೆಂಗಳೂರು: 2, 52
ಕಿವೀಸ್ ಎದುರು ಪುಣೆ: 0, 8
ಕಿವೀಸ್ ಎದುರು ಮುಂಬೈ: 18, 11
ಆಸೀಸ್ ಎದುರು ಅಡಿಲೇಡ್: 3, 6