ತವರಿಗೆ ಹಾರಿದ ಮಾರ್ಕೆಲ್​... ಚಾಂಪಿಯನ್ಸ್​ ಟ್ರೋಫಿ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಗೆ ಬಿಗ್​ ಶಾಕ್​! Team India

Team India
Published on

Team India : ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮನ್ನವೇ ಟೀಮ್ ಇಂಡಿಯಾಗೆ ಭಾರಿ ಆಘಾತ ಎದುರಾಗಿದೆ. ತಂದೆಯ ಹಠಾತ್ ನಿಧನದಿಂದಾಗಿ ಭಾರತೀಯ ತಂಡದ ಬೌಲಿಂಗ್ ಕೋಚ್ ಮಾರ್ನೆ ಮೋರ್ಕೆಲ್ ಅನಿವಾರ್ಯವಾಗಿ ತವರಿಗೆ ಮರಳಿದ್ದಾರೆ.

ಫೆಬ್ರವರಿ 15 ರಂದು ಟೀಮ್ ಇಂಡಿಯಾ ಜೊತೆಗೆ ಮಾರ್ನೆ ಮಾರ್ಕೆಲ್​, ಭಾರತದಿಂದ ದುಬೈಗೆ ಆಗಮಿಸಿದ್ದರು. ಫೆಬ್ರವರಿ 16 ರಂದು ಮೊದಲ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದ್ದ ಮಾರ್ಕೆಲ್​, ತನ್ನ ತಂದೆಯ ಮರಣದ ಸುದ್ದಿ ಕೇಳಿದ ನಂತರ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಮಾರ್ಕೆಲ್​ ಯಾವಾಗ ಭಾರತೀಯ ತಂಡವನ್ನು ಮತ್ತೆ ಸೇರಿಕೊಳ್ತಾರೆ ಎಂಬುದರ ಕುರಿತು ಸ್ಪಷ್ಟತೆ ಇಲ್ಲ. ಅವರ ಅನುಪಸ್ಥಿತಿಯು ಟೀಮ್ ಇಂಡಿಯಾದ ವೇಗದ ಬೌಲಿಂಗ್​ ವಿಭಾಗದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

40 ವರ್ಷದ ಮಾರ್ಕೆಲ್​, ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತದ ವೇಗದ ಬೌಲಿಂಗ್ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡರು. ಇದೀಗ ಭಾರತದ ವೇಗದ ಬೌಲಿಂಗ್​ ವಿಭಾಗವು ತುಂಬಾ ಬಲಿಷ್ಠವಾಗಿದೆ. ಮಾರ್ಕಲೆ್​ ನೇತೃತ್ವದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಪ್ರಭಾವ ಬೀರಿದರು. ಯುವ ವೇಗಿ ಹರ್ಷಿತ್ ರಾಣಾ ಇತ್ತೀಚಿನ ಇಂಗ್ಲೆಂಡ್ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಮಾರ್ಕೆಲ್​ ನೇತೃತ್ವದಲ್ಲಿ ಹರ್ಷಿತ್ ಪ್ರವರ್ಧಮಾನಕ್ಕೆ ಬಂದಿದ್ದಾರೆ.

ಇದೇ ಸಂದರ್ಭದಲ್ಲಿ ಫೆಬ್ರವರಿ 20 ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶವನ್ನು ಎದುರಿಸಲಿದೆ. ಅದರ ನಂತರ ಫೆಬ್ರವರಿ 23 ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ. ಕನಿಷ್ಠ ಈ ಪಂದ್ಯಕ್ಕಾದರೂ ಮಾರ್ಕೆಲ್​ ಲಭ್ಯವಿರಬೇಕೆಂದು ಭಾರತೀಯ ಅಭಿಮಾನಿಗಳು ಬಯಸಿದ್ದಾರೆ. ಪಾಕ್​ ಬಳಿಕ ಮಾರ್ಚ್ 2 ರಂದು ಭಾರತ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಗುಂಪು ಹಂತದ ಪಂದ್ಯವನ್ನು ಆಡಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಎಲ್ಲ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದರೆ, ಉಳಿದ ಎಲ್ಲ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ. ಈ ಪಂದ್ಯಾವಳಿಯಲ್ಲಿ, ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಎ ಗುಂಪಿನಲ್ಲಿವೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಬಿ ಗುಂಪಿನಲ್ಲಿ ಸ್ಪರ್ಧಿಸುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net