

ಬೆಂಗಳೂರು: ಬಾಲಿವುಡ್ ದಿಗ್ಗಜ ಅಮಿತಾಬ್ ಬಚ್ಚನ್ ಶೀಘ್ರವೇ ಗುಣಮುಖರಾಗಲೆಂದು ಹಾರೈಸಿ ಭಾನುವಾರ ಬೆಳಗ್ಗೆಯಿಂದಲೇ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಕೋವಿಡ್-19ಕ್ಕೆ ಒಳಗಾಗಿರುವ ಬಿಗ್ ಬಿ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಡಬ್ಲ್ಯುಡಬ್ಲ್ಯುಇ ದಿಗ್ಗಜ ಜಾನ್ ಸೆನಾ ಇನ್ಸ್ಟಾಗ್ರಾಂನಲ್ಲಿ ಬಿಗ್ ಬಿ ಹಾಗೂ ಅಭಿಷೇಕ್ ಬಚ್ಚನ್ ಫೋಟೋ ಶೇರ್ ಮಾಡುವ ಮೂಲಕ ಶೀಘ್ರವೇ ಗುಣಮುಖರಾಗುವಂತೆ ಹಾರೈಸಿದ್ದಾರೆ. ಅಲ್ಲದೆ, ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಾಗೂ ಮಾಜಿ ವೇಗಿ ಶೋಯಿಬ್ ಅಖ್ತರ್ ಕೂಡ ಬಿಗ್ ಬಿ ಆರೋಗ್ಯ ಸುಧಾರಣೆಯಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಬಿಗ್ ಬಿ ಕರೊನಾ ವೈರಸ್ ಪಾಸಿಟಿವ್ ದೃಢವಾದ ಬೆನ್ನಲ್ಲೇ ಬಾಲಿವುಡ್ ವಲಯ, ಕ್ರೀಡಾವಲಯದ ದಿಗ್ಗಜರು ಆರೋಗ್ಯ ಸುಧಾರಣೆಗೆ ಹಾರೈಸಿದ್ದಾರೆ. ಡಬ್ಲ್ಯುಡಬ್ಲ್ಯುಇ ದಿಗ್ಗಜ ಜಾನ್ ಸೆನಾ, ಇದೀಗ ಹಾಲಿವುಡ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಏನು ಬರೆಯದೆ, ಫೋಟೋ ಶೇರ್ ಮಾಡುವ ಮೂಲಕ ಪರೋಕ್ಷವಾಗಿ ಬಿಗ್ ಬಿ ಆರೋಗ್ಯ ಚೇತರಿಕೆಗೆ ಕೇಳಿಕೊಂಡಿದ್ದಾರೆ. ಕಳೆದ ಮೂರು ತಿಂಗಳಿಂದ ರಿಂಗ್ನಿಂದ ಹೊರಗುಳಿದಿರುವ ಜಾನ್, 2019ರ ಜನವರಿಯಲ್ಲಿ ಕಡೆ ಬಾರಿಗೆ ಸ್ಪರ್ಧಾತ್ಮಕ ಫೈಟ್ನಲ್ಲಿ ಸ್ಪರ್ಧಿಸಿದ್ದರು. ಕರೊನಾ ವೈರಸ್ ಭೀತಿ ನಿಂತ ಬಳಿಕವಷ್ಟೇ ಸ್ಪರ್ಧಾತ್ಮಕ ಫೈಟ್ಗೆ ವಾಪಸಾಗುವುದಾಗಿ ಘೋಷಿಸಿದ್ದಾರೆ.
ಬಾಲಿವುಡ್ ಬಾದ್ ಷಾ ಎಂದು ಕರೆಸಿಕೊಂಡಿರುವ ಅಮಿತಾಭ್ ಬಚ್ಚನ್ ತಮಗೆ ಕೋವಿಡ್-19ರ ಪಾಸಿಟಿವ್ ಇರುವುದರ ಬಗ್ಗೆ ಶನಿವಾರ ಖಚಿತಪಡಿಸಿದ್ದರು. ಬಳಿಕ ಕುಟುಂಬ ಇತರ ಸದಸ್ಯರಿಗೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಮಿತಾಭ್ ಪತ್ನಿ ಜಯಾ ಬಚ್ಚನ್ ಹೊರತುಪಡಿಸಿ, ಅಭಿಷೇಕ್, ಸೊಸೆ ಐಶ್ವರ್ಯ ಅಭಿಷೇಕ್ ಬಚ್ಚನ್, ಮೊಮ್ಮಗಳು ಆರಾಧ್ಯ ವರದಿ ಪಾಸಿಟಿವ್ ಬಂದಿದೆ. ಐಶ್ವರ್ಯ ಹಾಗೂ ಆರಾಧ್ಯ ಅವರಿಗೆ ಮನೆಯಲ್ಲೇ ಕ್ವಾರಂಟೈನ್ ಮಾಡಲಾಗಿದೆ.