

ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯನ್ನು ಟೀಮ್ ಇಂಡಿಯಾ ಈಗಾಗಲೇ 2-0 ಅಂತರದಲ್ಲಿ ಗೆದ್ದುಕೊಂಡಿರುವುದು ಗೊತ್ತೇ ಇದೆ. ಇಂದು (ಜುಲೈ 30) ಶ್ರೀಲಂಕಾ ವಿರುದ್ಧ ಭಾರತ ತಂಡ ಕೊನೆಯ ಟಿ20 ಪಂದ್ಯವನ್ನಾಡಲಿದೆ. ಈ ಪಂದ್ಯವನ್ನು ಗೆದ್ದು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಭರವಸೆ ಇದೆ.
ಟಿ20 ಸರಣಿಯ ಬಳಿಕ ಭಾರತ ತಂಡ ಲಂಕಾ ವಿರುದ್ಧ ಮೂರು ಏಕದಿನ ಸರಣಿಯನ್ನು ಆಡಲಿದೆ. ಆಗಸ್ಟ್ 2 ರಿಂದ ಏಕದಿನ ಸರಣಿ ಆರಂಭವಾಗಲಿದ್ದು, ಈ ಏಕದಿನ ಸರಣಿಗಾಗಿ ನಾಯಕ ರೋಹಿತ್ ಶರ್ಮ ಈಗಾಗಲೇ ಶ್ರೀಲಂಕಾ ತಲುಪಿದ್ದಾರೆ. ಇಂದು ವಿರಾಟ್ ಕೊಹ್ಲಿ ಕೂಡ ಬರಲಿದ್ದಾರೆ. ಈ ಹಿನ್ನಲೆಯಲ್ಲಿ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಬಿಸಿಸಿಐ ನಾಯಕರು ಹಲವು ಎಚ್ಚರಿಕೆಗಳನ್ನು ನೀಡಿದ್ದಾರಂತೆ.
ಇದುವರೆಗೆ ಟಿ20 ಸರಣಿಯಲ್ಲಿ ಯುವ ಕ್ರಿಕೆಟಿಗರೊಂದಿಗೆ ಮಾತ್ರ ಸಮಯ ಕಳೆದ ಗಂಭೀರ್, ಟೀಮ್ ಇಂಡಿಯಾದಲ್ಲಿ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿಯಂತಹ ಸೂಪರ್ ಸ್ಟಾರ್ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲಿದ್ದಾರೆ. ಯುವ ಕ್ರಿಕೆಟಿಗರೊಂದಿಗೆ ವ್ಯವಹರಿಸಿದಂತೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ಬಳಿ ವ್ಯವಹರಿಸಲು ಪ್ರಯತ್ನಿಸಬೇಡಿ. ಹಿರಿಯ ಆಟಗಾರರಾಗಿ ಅವರೊಂದಿಗೆ ಪ್ರೋಟೋಕಾಲ್ ಅನುಸರಿಸಬೇಕು ಎಂದು ಗಂಭೀರ್‌ಗೆ ಬಿಸಿಸಿಐ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ ಎಂದು ವರದಿಗಳು ತಿಳಿಸಿವೆ.
ಇದು ಐಪಿಎಲ್ ರೀತಿಯ ಫ್ರಾಂಚೈಸಿ ತಂಡವಲ್ಲ ಬದಲಾಗಿ ಭಾರತ ತಂಡ ಎಂಬುದನ್ನು ನೆನಪಿಟ್ಟುಕೊಳ್ಳಿ. ಎಲ್ಲವನ್ನು ನಿಮ್ಮಿಷ್ಟದಂತೆ ಮಾಡಲು ಇಲ್ಲಿ ಸಾಧ್ಯವಿಲ್ಲ, ಹೊಸದರಲ್ಲಿ ಸ್ವಲ್ಪ ತೊಂದರೆ ಆಗಬಹುದು. ಈ ವಿಚಾರದಲ್ಲಿ ರಾಹುಲ್ ದ್ರಾವಿಡ್ ಕೂಡ ಸ್ವಲ್ಪ ಕಷ್ಟಪಟ್ಟಿದ್ದಾರೆ. ಆದರೆ, ನಂತರ ಅವರಿಗೆ ಎಲ್ಲವೂ ಅರ್ಥವಾಯಿತು ಎಂದು ಗಂಭೀರ್‌ಗೆ ಬಿಸಿಸಿಐ ಅಧಿಕಾರಿಗಳು ವಿವರಿಸಿದ್ದಾರೆ ಎನ್ನಲಾಗಿದೆ.
ದ್ರಾವಿಡ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಗೊಂಡು ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳುವ ಹೊತ್ತಿಗೆ ಭಾರತೀಯ ಡ್ರೆಸ್ಸಿಂಗ್ ರೂಮ್‌ನ ವ್ಯವಹಾರಗಳಲ್ಲಿ ಹಲವು ಬದಲಾವಣೆಗಳಾದವು. ಅದರಂತೆ ನಡೆದುಕೊಳ್ಳುವಂತೆ ಗಂಭೀರ್‌ಗೆ ಸಲಹೆ ನೀಡಿದರು. ಮೇಲಾಗಿ ತಂಡದಲ್ಲಿ ಹಲವು ಕೋಟ್ಯಾಧಿಪತಿಗಳಿದ್ದು, ಫ್ರಾಂಚೈಸಿ ಕ್ರಿಕೆಟ್ನ ನಾಯಕರೂ ಇದ್ದಾರೆ. ಅವರ ಜೊತೆ ಎಚ್ಚರಿಕೆಯಿಂದ ಇರಬೇಕು ಎಂದು ಬಿಸಿಸಿಐ ಹಿರಿಯರು ಗಂಭೀರ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. (ಏಜೆನ್ಸೀಸ್)