

ನವದೆಹಲಿ: ಸಾಮಾನ್ಯವಾಗಿ ಗಲ್ಲಿ ಕ್ರಿಕೆಟ್ನಲ್ಲಿ ಮಾತ್ರ ಇಂತಹ ದೃಶ್ಯಗಳನ್ನು ನೋಡಿದ್ದೇವೆ. ಹಳ್ಳಿಗಳಲ್ಲಿ ಕ್ರಿಕೆಟ್ ಆಡಲು ಸರಿಯಾದ ಮೈದಾನವಿಲ್ಲದಿದ್ದರೆ ಅಥವಾ ಕಡಿಮೆ ಆಟಗಾರರಿದ್ದರೆ ಮನೆಯ ಮುಂದಿರುವ ರಸ್ತೆಯಲ್ಲಿ ಅಥವಾ ಚಿಕ್ಕ ಜಾಗದಲ್ಲಿ ಮೋಜಿಗಾಗಿ ಕ್ರಿಕೆಟ್ ಆಡುತ್ತಾರೆ. ಸಾಮಾನ್ಯ ಕ್ರಿಕೆಟ್ನಲ್ಲಿನ ನಿಯಮಗಳ ಹೊರತಾಗಿ ಈ ಗಲ್ಲಿ ಕ್ರಿಕೆಟ್ನಲ್ಲಿ ಕೆಲವು ಹೆಚ್ಚುವರಿ ನಿಯಮಗಳಿವೆ. ಅವುಗಳಲ್ಲಿ ಒಂದು ಮನೆಗಳ ಮೇಲೆ ಚೆಂಡು ಹೊಡೆಯುವಂತಿಲ್ಲ.
ಯಾರಾದರೂ ಮನೆಗಳ ಮೇಲೆ ಚೆಂಡನ್ನು ಹೊಡೆದರೆ ಅವರನ್ನು ಔಟ್ ಎಂದು ನಿರ್ಣಯಿಸುತ್ತಾರೆ. ಏಕೆಂದರೆ ಮನೆಗಳ ಮೇಲೆ ಚೆಂಡು ಬಿದ್ದರೆ ಮನೆಯ ಮಾಲೀಕರು ಮತ್ತೆ ಚೆಂಡನ್ನು ಕೊಡುವುದಿಲ್ಲ. ಇಂತಹ ಎಷ್ಟೋ ಉದಾಯರಣೆಗಳನ್ನು ನಾವೂ ನೋಡಿದ್ದೇವೆ. ಅದಕ್ಕಾಗಿಯೇ ಗಲ್ಲಿ ಕ್ರಿಕೆಟ್ನಲ್ಲಿ ಇಂತಹ ನಿಯಮಗಳಿವೆ. ಹೀಗಾಗಿ ಆದಷ್ಟು ಮನೆಗಳ ಮೇಲೆ ಚೆಂಡನ್ನು ಹೊಡೆಯದಿರಲು ಪ್ರಯತ್ನಿಸುತ್ತಾರೆ. ಆದರೆ, ಈಗ ವೃತ್ತಿಪರ ಲೀಗ್ನಲ್ಲೂ ಇಂತಹದ್ದೇ ಒಂದು ದೃಶ್ಯ ನಡೆದಿದೆ.
ಮಿನಿ ಐಪಿಎಲ್ ಎಂದು ಕರೆಯಲ್ಪಡುವ ತಮಿಳುನಾಡು ಪ್ರೀಮಿಯರ್ ಲೀಗ್ನಲ್ಲಿ ಗಲ್ಲಿ ಕ್ರಿಕೆಟ್ ನೆನಪಿಸುವ ಘಟನೆ ನಡೆದಿದೆ. ಬ್ಯಾಟ್ಸ್ಮನ್ ಬಾರಿಸಿದ ಚೆಂಡು, ಕ್ರೀಡಾಂಗಣದಿಂದ ಹೊರಬಿದ್ದಾಗ ಆ ಜಾಗದ ಮಾಲೀಕ ಚೆಂಡನ್ನು ಕೊಡದೆ ತೆಗೆದುಕೊಂಡು ಹೋದನು. ಎಷ್ಟೇ ಕೇಳಿದರು ಆತ ಚೆಂಡನ್ನು ಹಿಂತಿರುಗಿಸಲೇ ಇಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ನಮ್ಮ ಗಲ್ಲಿ ಕ್ರಿಕೆಟ್ನಲ್ಲೂ ಇಂಥ ಘಟನೆ ನಡೆದಿದೆ ಎಂದು ನಗುತ್ತಿದ್ದಾರೆ.
ವಿವರಣೆಗೆ ಬರುವುದಾದರೆ, ತಮಿಳುನಾಡು ಪ್ರೀಮಿಯರ್ ಲೀಗ್-2024 ಭಾಗವಾಗಿ, ಭಾನುವಾರ ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೀಚೆಮ್ ಮಧುರೈ ಪ್ಯಾಂಥರ್ಸ್ ನಡುವಿನ ಪಂದ್ಯದಲ್ಲಿ ಈ ತಮಾಷೆಯ ಘಟನೆ ನಡೆದಿದೆ. ಚೆಪಾಕ್ ಸೂಪರ್ ಗಿಲ್ಲಿಸ್ ಬ್ಯಾಟಿಂಗ್ ಮಾಡುತ್ತಿದ್ದಾಗ ಸೀಚೆಮ್ ಮಧುರೈ ಪ್ಯಾಂಥರ್ಸ್ ಬೌಲರ್ ಮುರಗನ್ ಅಶ್ವಿನ್ ಎಸೆದ ಇನಿಂಗ್ಸ್ನ 14ನೇ ಓವರ್ನ ನಾಲ್ಕನೇ ಎಸೆತದಲ್ಲಿ ಚೆಪಾಕ್ ಸೂಪರ್ ಗಿಲ್ಲಿಸ್ ತಂಡದ ಬ್ಯಾಟ್ಸ್ಮನ್ ಪ್ರದೋಶ್ ಪಾಲ್ ಬೃಹತ್ ಸಿಕ್ಸರ್ ಬಾರಿಸಿದರು. ಅದು ಡೀಪ್ ಮಿಡ್ ವಿಕೆಟ್ನಿಂದ ಕ್ರೀಡಾಂಗಣದಿಂದ ಹೊರಬಿತ್ತು. ಆ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಚೆಂಡನ್ನು ತೆಗೆದುಕೊಂಡು ವಾಪಸ್ ಕೊಡದೆ ಅಲ್ಲಿಂದ ಹೊರಟು ಹೋದ. ಈ ದೃಶ್ಯಗಳನ್ನು ಕ್ಯಾಮರಾಮನ್ ರೆಕಾರ್ಡ್ ಮಾಡುತ್ತಿದ್ದಂತೆ ಕ್ರೀಡಾಂಗಣದಲ್ಲಿದ್ದವರೂ ನಕ್ಕರು. ಏನೂ ಮಾಡಲಾಗದೆ ಅಂಪೈರ್ಗಳು ಹೊಸ ಚೆಂಡನ್ನು ತಂದರು. (ಏಜೆನ್ಸೀಸ್)