

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಸತತ 2 ದಿನಗಳ ಮಳೆ ಅಡಚಣೆಯ ಬಳಿಕ ಎಸ್ಕೆಎಂಇ ಐಟಿಎಫ್ ಓಪನ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ಗುರುವಾರ ಕೊನೆಗೂ ಆರಂಭಗೊಂಡ ಪ್ರಧಾನ ಸುತ್ತಿನ ಕಾದಾಟದಲ್ಲಿ ಕರ್ನಾಟಕದ ಸೋಹಾ ಸಾಧಿಕ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು. ಕರ್ನಾಟಕದ ಇತರ ಆಟಗಾರ್ತಿಯರಾದ ಹರ್ಷಿಣಿ ನಾಗರಾಜ್ ಮತ್ತು ಕಾಶ್ವಿ ಸುನೀಲ್ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ಶ್ರೀನಿಧಿ ಬಾಲಾಜಿ 2ನೇ ಸುತ್ತಿನಲ್ಲಿ ನಿರಾಸೆ ಅನುಭವಿಸಿದರು.
ಕೆಎಸ್ಎಲ್ಟಿಎ ಸ್ಟೇಡಿಯಂನಲ್ಲಿ ನಡೆದ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ಆರನೇ ಶ್ರೇಯಾಂಕಿತೆ ಸೋಹಾ 6-0, 6-1ರಿಂದ ಬೆಲಾ ತಮ್ಹಂಕರ್ ವಿರುದ್ಧ ಗೆಲುವು ಸಾಧಿಸಿದರು. ಇದಕ್ಕೆ ಮುನ್ನ ಮೊದಲ ಸುತ್ತಿನಲ್ಲಿ ಅಮೆರಿಕದ ಶ್ರಿಯಾ ಅಟ್ಟುರು ವಿರುದ್ಧ 6-1, 6-2ರಿಂದ ಜಯಿಸಿದರು. ಬೆಂಗಳೂರಿನ ಸೋಹಾಗೆ ಐಟಿಎಫ್ ಟೂರ್ನಿಯಲ್ಲಿ ಇದು ಚೊಚ್ಚಲ ಕ್ವಾರ್ಟರ್ಫೈನಲ್ ಪ್ರವೇಶವಾಗಿದೆ.
ಅರ್ಹತಾ ಸುತ್ತಿನಿಂದ ಬಂದ ಅಭಯಾ ವೆಮುರಿ 3ನೇ ಶ್ರೇಯಾಂಕಿತೆ ಡೆನ್ಮಾರ್ಕ್ನ ಇಲೆನಾ ಜಮ್ಶಿಡಿ ವಿರುದ್ಧ 6-2, 7-6 ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದರು. ತನಿಷಾ ಕಶ್ಯಪ್, ವೈಷ್ಣವಿ ಅದ್ಕರ್, ಆಕಾಂಕ್ಷಾ ನಿಟ್ಟುರೆ ಎಂಟರ ಘಟ್ಟಕ್ಕೇರಿರುವ ಇತರ ಭಾರತೀಯರಾಗಿದ್ದಾರೆ.